ಭಾರತೀಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಕೆಲವೇ ಕೆಲವು ಸಮುದಾಯಗಳಲ್ಲಿ ಶ್ರೇಷ್ಠ ಗೌರವಕ್ಕೆ ಪಾತ್ರವಾಗಿರುವ ಒಂದು ಸಮುದಾಯ ಯಾವುದಾದರು ಇದ್ದರೆ ಅದು ಕುಂಬಾರ ಸಮಾಜ ಎಂದು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಬಯಸುತ್ತೇನೆ. ಸಜ್ಜನಿಕೆ, ಸರಳತೆ, ಕಾರ್ಯಶ್ರೇಷ್ಠತೆ, ಕೌಶಲ್ಯತೆಯಲ್ಲಿ ಪರಿಪೂರ್ಣತೆ, ಸಹಬಾಳ್ವೆಯಲ್ಲಿ ಆತ್ಮೀಯತೆ ಈ ಎಲ್ಲಾ ಗುಣಗಳನ್ನು ಹೊಂದಿರುವ ಹೆಮ್ಮೆಯ ಸಮಾಜ ಕುಂಬಾರ ಸಮಾಜ. ತ್ರಿಪದಿ ಚಕ್ರವರ್ತಿ, ತ್ರಿಪದಿ ಬ್ರಹ್ಮ ಎಂದು ಬಣ್ಣಿಸಲ್ಪಡುವ ಸರ್ವಜ್ಞನನ್ನು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಸ್ಮರಿಸುತ್ತೇನೆ . ಕನ್ನಡನಾಡಿನ ಶ್ರೇಷ್ಠತೆ ವಿಶ್ವಮಟ್ಟದಲ್ಲಿ ಎತ್ತಿ ಹಿಡಿದವರು ಇಬ್ಬರೇ ಇಬ್ಬರು. ಒಬ್ಬರು 12ನೇ ಶತಮಾನದ ಅಣ್ಣ ಬಸವಣ್ಣ, ಸಮಾಜಿಕ ಕ್ರಾಂತಿ ಹಾಗೂ ಕಾಯಕ ತತ್ವದಿಂದ ವಿಶ್ವಗುರು ಎನಿಸಿಕೊಂಡರೆ, ಜಗತ್ತಿನ ಯಾವುದೇ ಕವಿ, ದಾರ್ಶನಿಕನೂ ಕಲ್ಪಿಸಿ ನುಡಿಯಲಾಗದ ವಿಶಿಷ್ಠ ತ್ರಿಪದಿಗಳ ಮೂಲಕ ವಿಶ್ವಮಾನ್ಯರಾದವರು ಸರ್ವಜ್ಞ.
ಸರ್ವಜ್ಞರ ಕೊಡುಗೆ ಕುಂಬಾರ ಸಮಾಜದ್ದು ಎಂದು ಹೇಳಲು ನನಗೆ ರೋಮಾಂಚನವಾಗುತ್ತದೆ ಬಂಧುಗಳೇ.
ಇಂಥಾ ಮಹಾನ್ ಶ್ರೇಷ್ಠಕವಿ ಸರ್ವಜ್ಞರ ಪ್ರತಿಮೆಯನ್ನು ಪಕ್ಕದ ತಮಿಳುನಾಡಿನ ಚೆನೈನಲ್ಲಿ ಪ್ರತಿಷ್ಠಾಪಿಸಿ, ಸರ್ವಜ್ಞರು ತ್ರಿಪದಿ ಜನಕರಷ್ಟೇ ಅಲ್ಲ ಮಾನವ ಬಂಧುತ್ವÀದ ರಾಯಭಾರಿಯೂ ಹೌದು ಎಂಬುದರ ಸಂದೇಶ ಇಡೀ ದೇಶಕ್ಕೆ ಪಸರಿಸಲು ಕಾರಣರಾದವರು ಅಂದು ಮುಖ್ಯಮಂತ್ರಿಗಳಾಗಿದ್ದ ನಿಮ್ಮ ನೆಚ್ಚಿನ ಯಡಿಯೂರಪ್ಪನವರು ಎಂದು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳುತ್ತೇನೆ ಬಂಧುಗಳೇ.
ಕರ್ನಾಟಕ ಹಾಗೂ ತಮಿಳುನಾಡಿನ ಭಾಷಾಭಾಂಧವ್ಯಕ್ಕೆ ದಶಕಗಳ ಕಾಲ ದಕ್ಕೆಯಾಗಿದ್ದ ತಿರುವಳ್ಳವಾರ್ ಪ್ರತಿಮೆ ವಿವಾದವನ್ನು ಸರ್ವಜ್ಞ ಪ್ರತಿಮೆ ಸ್ಥಾಪನೆಯ ಮೂಲಕ ಹಾಗೂ ಕನ್ನಡನಾಡಿನ ಹೆಗ್ಗಳಿಕೆಯ ಸಂಕೇತ ಸರ್ವಜ್ಞ ಎಂದು ಸಾರುವ ಮೂಲಕ ಎರಡೂ ರಾಜ್ಯಗಳ ಬಾಂಧವ್ಯದ ಬೆಸುಗೆಗೆ ಬುನಾದಿ ಹಾಕಿದವರು ಯಡಿಯೂರಪ್ಪನವರು.
ಈ ವೇದಿಕೆಯಲ್ಲಿ ಶರಣ ಪರಂಪರೆಯ ಕುಂಬಾರ ಗುಂಡಯ್ಯನನ್ನು ಸ್ಮರಿಸದೇ ಇರಲು ಸಾಧ್ಯವೇ ಇಲ್ಲ, ಇಂದು ನಿಜ ಸಮಾಜದ ಕಲ್ಪನೆ ಯಾರೂ ನೆನಸುತ್ತಿಲ್ಲ . ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ನಮ್ಮ ನೆಲದ ನೈಜ ಕಸುಬುಗಳು, ದೇಸೀಯ ಉತ್ಪನ್ನಗಳು ಮೂಲೋತ್ಪಾಟನೆಯಾಗುತ್ತಿವೆ. ನಮ್ಮ ಕಾಯಕ ಸಮುದಾಯಗಳು ಅಂದು ಕಟ್ಟಿಕೊಟ್ಟ ನಾಗರಿಕ ಸಮಾಜವೇ ನಿಜವಾದ ಸಮಾಜ.
ಅನ್ನದಾತ ರೈತನ ಬೆಳದ ಬೆಳೆ ಬೇಯಿಸಿಕೊಂಡು ತಿನ್ನಲು ಕುಂಬಾರ ಗುಂಡಯ್ಯನ ಸಮಾಜ, ಮಡಿಕೆ-ಕುಡಿಕೆ ಮಾಡಿಕೊಡದಿದ್ದರೆ ಮನುಷ್ಯ ಪ್ರಾಣಿಯಂತೆ ಆಹಾರ ಸೇವಿಸಬೇಕಿತ್ತು. ಮನುಷ್ಯನ ನಾಗರೀಕತೆಯ ಭಾಗವಾಗಿದ್ದ ಕುಂಬಾರನಿಲ್ಲದ ಸಮಾಜ ಅದ್ಯಾವ ಸಮಾಜ? ಹಾಗೆಯೇ ಮನೆ-ಮನಗಳನ್ನು ಬೆಳಗಲು ದೀಪ ತಯಾರಿಸಿ ಕೊಡದಿದ್ದರೆ, ದೀಪಕ್ಕೆ ಗಾಣಿಗ ಸಮಾಜ ಎಣ್ಣೆ ತೆಗೆದು ಕೊಡದಿದ್ದರೆ, ಎಣ್ಣೆಗೆ ಹತ್ತಿಯ ಬತ್ತಿ ಹಾಗೂ ನಮ್ಮ ಮಾನಮುಚ್ಚಲು ಬಟ್ಟೆಯನ್ನು ನೇಕಾರ ನೇಯ್ದುಕೊಡದಿದ್ದರೆ, ನೇಯ್ದ ಬಟ್ಟೆಗೆ ಸಿಂಪಿಗ ಸಮುದಾಯ ನಮ್ಮ ದೇಹದ ಅಳತೆಗೆ ತಕ್ಕಂತೆ ಹೊಲಿದುಕೊಡದಿದ್ದರೆ, ತೊಟ್ಟ ಬಟ್ಟೆ ಮಡಿವಾಳ ಮಡಿ ಮಾಡಿಕೊಡದಿದ್ದರೆ, ಹಡಪದ ಸಮಾಜ ಕೇಶಾಲಂಕಾರ ಮಾಡಿಕೊಡದಿದ್ದರೆ, ಪೌರಕಾರ್ಮಿಕ ಬಂಧು ಊರನ್ನು ಸ್ವಚ್ಚಗೊಳಿಸದಿದ್ದರೆ, ಉಪ್ಪಾರ ಉಪ್ಪು ತೆಗೆದುಕೊಡದಿದ್ದರೆ, ಹರಳಯ್ಯನ ಸಮಾಜ ನಮ್ಮ ಚರ್ಮ ಹದಮಾಡಿ ಪಾದರಕ್ಷೆ ಮಾಡಿಕೊಡದಿದ್ದರೆ..,,,, ಹೀಗೆ ಹೇಳುತ್ತಾ ಹೋದರೆ ಪ್ರತಿಯೊಂದು ಕಾಯಕ ಸಮಾಜಗಳೂ ಒಂದೊAದು ಕೊಡುಗೆ ನೀಡಿ ನಾಗರೀಕ ಸಮಾಜ ನಿರ್ಮಿಸಿವೆ. ಈ ಕಾಯಕ ಸಮಾಜಗಳು ಇಲ್ಲದಿದ್ದರೆ, ಭಾರತ ಭಾರತವಾಗಿ ಉಳಿಯಲು ಕರ್ನಾಟಕದಲ್ಲಿ ಕಲ್ಯಾಣಕಾರ್ಯ ಜರುಗಲು ಹೇಗೆ ಸಾಧ್ಯವಾಗುತ್ತಿತ್ತು ? ಹೇಳಿಬಂಧುಗಳೇ.
ಇವತ್ತಿಗೂ ಕಂಬಾರರ ಮಣ್ಣಿನ ಕೌಶಲ್ಯದ ಮಡಿಕೆ-ಕುಡಿಕೆ, ಅಲಂಕಾರಿಕ ವಸ್ತುಗಳು ವಿಶ್ವಮಾನ್ಯತೆ ಪಡೆದಿವೆ, ಆರೋಗ್ಯದ ರಕ್ಷಾಕವಚಗಳಾಗಿವೆ. ಇದು ಕುಂಬಾರ ವೃತ್ತಿಯ ಶ್ರೇಷ್ಠತೆಯಿಂದಾಗಿದೆ. ಕುಂಬಾರ ಸಮಾಜವೂ ಸೇರಿದಂತೆ ಕುಲಕಸುಬು ಆಧಾರಿತ ಸಮಾಜಗಳು ಮಾತ್ರ ಸಮಾಜದ ಶ್ರೇಷ್ಠರತ್ನಗಳು ಎಂದು ಈ ಸಂದರ್ಭದಲ್ಲಿ ಎದೆತಟ್ಟಿಕೊಂಡು ಹೇಳುತ್ತೇನೆ ಬಂಧುಗಳೇ.
ಪುರಾಣಪುಣ್ಯ ಕಥೆಗಳಲ್ಲಿ ಕುಂಬಾರ ಗುಂಡಯ್ಯತನ್ನ ಭಕ್ತಿಯ ಶಕ್ತಿಯಿಂದ ಶಿವಪಾರ್ವತಿಯರನ್ನೇ ತನ್ನ ಬಾಗಿಲಿಗೆ ಕರೆಸಿಕೊಂಡ ಕಥೆಯ ಹಿನ್ನಲೆ ಇದೆ. ಕಾಯಕದಲ್ಲಿ ಕೈಲಾಸ ಕಾಣು ಎಂದ ಬಸವಣ್ಣನವರ ಶರಣಪರಂಪರೆಯ ಕಲ್ಪನೆ ಮೀರಿ ನನಗೆ ಕೈಲಾಸವಿಲ್ಲದ ಕಾಯಕವೇ ಬೇಕು ಕಾಯಕವೇ ಮಹಾನ್ ಶ್ರೇಷ್ಠ ಅದೇ ಶಿವನ ಒಲಿಸಿಕೊಳ್ಳುವ ಮಾರ್ಗ ಎಂದು ಹೇಳಿದ ಒಬ್ಬ ಶರಣ ಇದ್ದರೆ, ಅದು ಕುಂಬಾರ ಗುಂಡಯ್ಯ ಮಾತ್ರ ಎನ್ನುವುದು ಕಂಬಾರರ ಹೆಗ್ಗಳಿಕೆ ಯಾಗಿದೆ .
“ಬೇಡೆನಗೆ ಕೈಲಾಸ
ಬಾಡುವುದು ಕಾಯಕವು
ನೀಡೆನಗೆ ಕಾಯಕವ
ಕುಣಿದಾಡಿ ನಾಡಹಂದರಕೆ ಹಬ್ಬಿಸುವೆ”
ಹೀಗೆಂದು ಶಿವಶರಣ ಕುಂಬಾರ ಗುಂಡಯ್ಯ ಕೈಲಾಸವನ್ನು ನಿರಾಕರಿಸಿದವನು. ನನಗೆ ಕಾಯಕವೇ ಶ್ರೇಷ್ಠ ಎಂದು ಹೇಳುವ ಮಹಾನ್ ಶಿವ ಶರಣನನ್ನುಪಡೆದ ಸಮಾಜ ನಮ್ಮ ಹೆಮ್ಮೆಯ ಕುಂಬಾರ ಗುಂಡಯ್ಯನ ಸಮಾಜ,