ಚಿತ್ರದುರ್ಗ –ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆ. ರಾಜಧಾನಿ ಬೆಂಗಳೂರಿನ ಕೇಂದ್ರ ಸ್ಥಳದಿಂದ ವಾಯವ್ಯ ದಿಕ್ಕಿನಲ್ಲಿ 200 ಕಿ.ಮೀ. ದೂರದಲ್ಲಿದೆ.
ಚಿತ್ರದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ ತಾಲ್ಲೂಕುಗಳು. ಕುತೂಹಲ ಕೆರಳಿಸುವ ಸ್ಥಳ ಪುರಾಣಗಳು, ಪುರಾತನವಾದ ಮನುಷ್ಯ ವಾಸಸ್ಥಳದ ನೆಲೆಗಳು, ಪ್ರಾಚೀನ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರಾಶಸ್ತ್ಯದ ಸ್ಥಳಗಳು ಇವೆ. ಈ ಜಿಲ್ಲೆಯು ಸಾವಿರಾರು ವರ್ಷಗಳ ನಾಗರಿಕತೆಗಳ ತವರು ಹಾಗೂ ಪ್ರಾಚೀನತೆ, ಆಧುನಿಕತೆಗಳ ಸಮ್ಮಿಲನ ಹೊಂದಿರುವ ಪ್ರದೇಶವಾಗಿದೆ.
ಕ್ರಿ.ಶ.02ನೇ ಶತಮಾನದಲ್ಲಿ ಇದು ಮೌರ್ಯರ ಸಾಮಂತರಾಗಿದ್ದ ಶತವಾಹನರಿಗೆ ವಶವಾಯಿತು. ಆಗ ಬೌದ್ಧಧರ್ಮ ಪ್ರಚಾರದಲ್ಲಿತ್ತು. ಆ ನಂತರ ಇದು ಬನವಾಸಿ ಕದಂಬರ ಆಳ್ವಿಕೆಗೆ ಸೇರಿತು. ಮುಂದೆ ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಕಾಮಗೇತಿ ವಂಶದ ಪಾಳೆಯಗಾರರು, ಹೈದರ್ ಅಲಿ ಟಿಪ್ಪು ಸುಲ್ತಾನರು ಹಾಗೂ ಮೈಸೂರು ಅರಸರು ಆಳ್ವಿಕೆ ನಡೆಸಿದ್ದಾರೆ.
ಪಾಳೆಯಗಾರರ ಆಳ್ವಕೆಯ ಕಾಲ ಚಿತ್ರದುರ್ಗ ಇತಿಹಾಸ ಕಾಲದಲ್ಲಿ ಮಹತ್ವ ಪೂರ್ಣವಾಗಿದೆ. ಈ ಕಾಲದಲ್ಲಿ ಇಲ್ಲಿನ ಕೋಟೆ-ಕೊತ್ತಲಗಳು ಬಲಗೊಂಡವು. ಗುಡಿಗೋಪುರಗಳು, ಮಠಮಾನ್ಯಗಳು ಉದ್ದಾರವಾದವು. ಅದರಿಂದ ರಾಜಕೀಯ ಸ್ಥಾನಮಾವ ವೃದ್ಧಿಸಿತು. ಚಿತ್ರದುರ್ಗವು ಪಾಳೆಯಗಾರರ ರಾಜಧಾನಿಯಾಗಿ ಮೆರೆಯಿತು. ಪಾಳೆಯಗಾರರಲ್ಲಿ ಅತ್ಯಂತ ಪ್ರಭಾವಿ ಶಕ್ತಿಶಾಲಿ ಹಾಗೂ ಪ್ರಖ್ಯಾತ ಪಾಳೆಯಗಾರ ಎಂದರೆ ಮದಕರಿನಾಯಕ, ಹೈದರ್ ಅಲಿ ವಿರುದ್ಧ ಹೋರಾಡಿದ ಒನಕೆ ಒನಕೆ ಓಬವ್ವ ಧೀರ ಮಹಿಳೆಯಾಗಿದ್ದಾಳೆ.
ಜಾನಪದ ಸಾಹಿತ್ಯ ಮತ್ತು ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯ, ಆಚರಣೆ, ನಂಬಿಕೆಗಳನ್ನು ಒಳಗೊಂಡ ಬಿಡಿ ಹಾಡುಗಳು, ಖಂಡಕಾವ್ಯ, ಮಹಾಕಾವ್ಯಗಳಿವೆ. ಗಾದ್ರಿ ಪಾಲನಾಯಕನ ಕಥನಕಾವ್ಯ, ಎತ್ತಪ್ಪ ಜುಂಜಪ್ಪನ ಮಹಾಕಾವ್ಯಗಳಿವೆ. ನಾಡೋಜ ಸಿರಿಯಜ್ಜಿ, ತೋಪಮ್ಮ, ಭೋವಿ ಜಯಮ್ಮ, ದಾನಮ್ಮ ಮೊದಲಾದ ಜನಪದ ಸಾಹಿತ್ಯದ ಸಿರಿ ಇದೆ. ಕೋಲಾಟ, ಭಜನೆ, ಸೋಬಾನೆ, ದೇವರಪದ, ಸುಗ್ಗಿಪದ ಮುಂತಾದ ಹಾಡುಗಳು, ಉರುಮೆ. ತಮಟೆ, ಕಹಳೆ, ಖಾಸಾ ಬೇಡರ ಪಡೆ, ಮರಗಾಲು ಕುಣಿತ, ಮಹಿಳಾ ತಮಟೆ, ಡೊಳ್ಳು ಕುಣಿತ, ಮೂಡಲಪಾಯ, ವೀರಗಾಸೆ ಮೊದಲಾದ ಜಾನಪದ ಪ್ರಕಾರಗಳು ಜಿಲ್ಲೆಯಲ್ಲಿವೆ.
ಮಗ್ಗಲೂರು ಚನ್ನಬಸವಣ್ಣ (18ನೇ ಶತ), ಲೊಡಗನೂರುನವರು ಎನ್ನಲಾದ ಚಂದ್ರಭೀಮಕವಿಯ ಮದಕರಿ ರಾಜೇಂದ್ರದಂಡಕ (18ನೇ ಶತ.), ಬೃಹನ್ಮಠದ ಮಹಾದೇವಕವಿ (19ನೇ ಶತ), ಆರ್. ನರಸಿಂಹಾಚಾರ್ಯ, ಮಾರ್ಟಿಮರ್ ವ್ಹೀಲರ್, ಡಾ. ಎಂ.ಹೆಚ್. ಕೃಷ್ಣ, ಹುಲ್ಲೂರು ಶ್ರೀನಿವಾಸ ಜೋಯಿಸರು, ಎಂ.ಎಸ್.ಪುಟ್ಟಣ್ಣಯ್ಯ, ದುರ್ಗದ ಚಾರಿತ್ರಿಕ ಲಾವಣಿ ಬರೆದ ಲಾಳಸಿಂಗಿ ಸೋಮಣ್ಣ, ಚಿತ್ರದುರ್ಗ ಬಖೈರು ಖ್ಯಾತಿಯ ಭೀಮಾಜಿ ಪಂತ್, ಬಿ.ಎಲ್.ರೈಸ್, ಪ್ರೊ.ಶ್ರೀಶೈಲ ಆರಾಧ್ಯ,, ಪ್ರೊ.ಲಕ್ಷ್ಮಣ್ ತೆಲಗಾವಿ, ಡಾ. ಬಿ.ರಾಜಶೇಖರಪ್ಪ ಮೊದಲಾದವರು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಹಿರಿಯೂರಿನ ಮಾದವಾಲಂಕಾರ ಬರೆದ ಮಾಧವ, ವಿರೂಪಾಕ್ಷ ಶತಕ ಬರೆದ ರಂಗಕವಿ, ಬಬ್ಬೂರು ರಂಗ ಬರೆದ ಕೃತಿಗಳು, ಆಧುನಿಕ ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿಗಳಾದ ಟಿ.ಎಸ್. ವೆಂಕಣ್ಣಯ್ಯ, ತ.ಸು.ಶಾಮರಾಯರು, ಕಾದಂಬರಿಕಾರ ತ.ರಾ.ಸುಬ್ಬರಾವ್, ಸೀತಾರಾಮಶಾಸ್ತ್ರಿ, ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು, ಬೆಳಗೆರೆ ಕೃಷ್ಣಶಾಸ್ತ್ರಿಗಳು, ಬೆಳಗೆರೆ ಜಾನಕಮ್ಮ ಮುಂತಾದವರು ಕಥೆ, ಕವನ, ವಿಮರ್ಶೆ, ಕಾದಂಬರಿ, ಸಂಶೋಧನೆ, ವೈಚಾರಿಕತೆ ಮೊದಲಾದ ಸಾಹಿತಿಗಳು, ಚಿಂತಕರು, ಬರಹಗಾರರಿದ್ದಾರೆ.
ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶಿವಸಂಚಾರ ಕಲಾತಂಡ, ಮುರುಘಾ ಮಠದ ಜಮುರಾ ಸುತ್ತಾಟ, ಕುಮಾರೇಶ್ವರ ನಾಟಕ ಸಂಘ, ರಂಗಸೌರಭ ಕಲಾ ಸಂಘ, ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ ಮೊದಲಾದ ಕಲಾತಂಡಗಳು ವಿಭಿನ್ನ ರಂಗ ಪ್ರಯೋಗ ಹಾಗೂ ನೃತ್ಯ ರೂಪಕಗಳ ಪ್ರದರ್ಶನಗಳಿಂದ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ.
ಐತಿಹಾಸಿಕ ಹಾಗೂ ಕೋಟೆಗಳ ನಗರ ಎಂದು ಪ್ರಖ್ಯಾತಿ ಪಡೆದ ಚಿತ್ರದುರ್ಗ ನಗರ ಮಧ್ಯ ಭಾಗದಲ್ಲಿರುವ ರಂಗಮಂದಿರ ಆಧುನಿಕ ಸಾಹಿತಿ ತಳುಕಿನ ರಾಮಸ್ವಾಮಿ ಸುಬ್ಬರಾವ್ (ತ.ರಾ.ಸು) ಹೆಸರಿನಲ್ಲಿ ದಿನಾಂಕ 11-11-2006ರಂದು ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಇವರಿಂದ ಲೋಕಾರ್ಪಣೆಗೊಂಡಿತು. ಇತ್ತೀಚೆಗೆ ನವೀಕರಣಗೊಂಡು ಅತ್ಯಾಧುನಿಕ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಹೊಂದಿದ್ದು, ವಿಶಾಲವಾದ ವೇದಿಕೆ, ಗ್ರೀನ್ ರೂಂ ಹಾಗೂ 534 ಆಸನಗಳ ವ್ಯವಸ್ಥೆಯಿರುತ್ತದೆ.