ಕರ್ನಾಟಕದ ನೈರುತ್ಯ ದಿಕ್ಕಿನಲ್ಲಿರುವ ಒಂದು ಜಿಲ್ಲೆ ಹಾಸನ. ಜಿಲ್ಲೆಯು ಶ್ರೀಮಂತ ಇತಿಹಾಸ ಹಾಗೂ ಸ್ಮರಣೀಯ ಘಟನೆಗಳಿಂದ ಕೂಡಿದೆ. ಬೇಲೂರು ತಾಲ್ಲೂಕಿನ ಈಗಿನ ಹಳೇಬೀಡಾಗಿರುವ ಹಿಂದಿನ ದ್ವಾರಸಮುದ್ರವನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಹೊಯ್ಸಳ ಚಕ್ರವರ್ತಿಗಳ ಅಧಿಕಾರವಧಿಯಲ್ಲಿ ಈ ಜಿಲ್ಲೆಯು ತನ್ನ ವೈಭವದ ಉತ್ತುಂಗವನ್ನು ತಲುಪಿತ್ತು. ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿ ಇರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆ ತವರಾಗಿದೆ. ಜೈನಸ್ಮಾರಕಗಳಿವೆ. ಶ್ರವಣಬೆಳಗೊಳ ಜಿಲ್ಲೆಯಲ್ಲಿರುವ ಜೈನರ ಸುಪ್ರಸಿದ್ಧ ಯಾತ್ರಾಸ್ಥಳವಾಗಿದೆ.
ಹೆಸರಿನ ಮೂಲ: ಜಿಲ್ಲೆಯನ್ನು ಕೇಂದ್ರ ಕಾರ್ಯಸ್ಥಾನದ ಪಟ್ಟಣ ಹಾಸನ ಹೆಸರಿನಿಂದಲೇ ಕರೆಯಲ್ಪಡುತ್ತಿದೆ. ಸ್ಥಳಪುರಾಣದ ಪ್ರಕಾರ ಹಾಸನ ‘ಸಿಂಹಾಸನಪುರ’ದ ಸಂಕ್ಷಿಪ್ತನಾಮ. ಪಾಂಡವರ ಪೈಕಿ ಅರ್ಜುನನ ಮರಿಮೊಮ್ಮಗನಾದ ಜನಮೇಜಯನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಬಹಳ ಜನಗಳ ನಂಬಿಕೆಯ ಪ್ರಕಾರ ಇಲ್ಲಿಯ ಅಧಿದೇವತೆ ಹಾಸನಮ್ಮ ಅಥವಾ ಹಾಸನಾಂಬೆ ಅಂದರೆ ಕನ್ನಡದಲ್ಲಿ ‘ನಗೆಮೊಗದ’ (ಹಸನ್ಮುಖಿ) ತಾಯಿ ಅಥವಾ ದೇವತೆಯಿಂದ “ಹಾಸನ” ಎಂಬ ಹೆಸರು ಬಂದಿದೆ. ಈ ಸಂದರ್ಭದಲ್ಲಿ ದೇವತೆ ಹಾಸನಾಂಬೆಯು ಈ ಸ್ಥಳಕ್ಕೆ ಹೇಗೆ ಬಂದಳೆನ್ನುವುದಕ್ಕೆ ಒಂದು ಸಾಂಪ್ರದಾಯಿಕ ಕಥೆ ಇಂತಿದೆ – ಒಮ್ಮೆ ಸಪ್ತ ಮಾತೃಕೆಯರು ವಾರಾಣಾಸಿಯಿಂದ (ಕಾಶಿ) ದಕ್ಷಿಣ ದಿಕ್ಕಿಗೆ ಪ್ರಯಾಣಿಸುವಾಗ, ಈ ಪ್ರದೇಶದ ರಮಣೀಯತೆಗೆ ಮಾರುಹೋಗಿ ಇಲ್ಲೇ ನೆಲೆಸುವ ನಿರ್ಧಾರ ಮಾಡಿದರು. ಆ ಪ್ರಕಾರ, ಸಹೋದರಿಯರಾದ ಸಪ್ತಮಾತೃಕೆಯರಲ್ಲಿ ಮೂವರು ಹಾಸನದಲ್ಲಿ ನೆಲೆಸಿದರು. ಇನ್ನು ಮೂವರು ಹಾಸನ ನಗರದಲ್ಲಿರುವ ದೇವಿಗೆರೆಯಲ್ಲಿ (ಕೆರೆ) ನೆಲೆಸಿದರು. ಅವರನ್ನು ಹಾಸನಾಂಬಾ ಎಂದು ಕರೆಯಲಾಗುತ್ತದೆ. ಇನ್ನೊಬ್ಬರು ಕೆಂಚಾಂಬಾ ಎಂಬ ಹೆಸರಿನಿಂದ, ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಎಂಬಲ್ಲಿ ಅರಣ್ಯದಲ್ಲಿ ನೆಲೆಸಿದರು.
ಜಿಲ್ಲೆಯು ಒಟ್ಟು 6826.15 ಚದರ ಕಿ.ಮೀ ವಿಸ್ತೀರ್ಣವಿದೆ. ಜಿಲ್ಲೆಯ ಅತ್ಯಧಿಕ ಉದ್ದ ದಕ್ಷಿಣದಿಂದ ಉತ್ತರಕ್ಕೆ 129 ಕಿ.ಮೀ ಹಾಗೂ ಅತ್ಯಧಿಕ ಅಗಲ ಪೂರ್ವದಿಂದ ಪಶ್ಚಿಮಕ್ಕೆ 116 ಕಿ.ಮೀ.ಗಳು. 8 ತಾಲ್ಲೂಕು, 38 ಹೋಬಳಿಗಳು ಹಾಗೂ 2369 ಗ್ರಾಮಗಳಿವೆ. ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 6845 ಚದರ ಕಿ.ಮೀ.ಗಳು. ಇಲ್ಲಿನ ಜನಸಂಖ್ಯೆ 15.67 ಲಕ್ಷ ಮತ್ತು ಸರಾಸರಿ ಮಳೆ ವಾರ್ಷಿಕ 1031 ಮಿ.ಮಿ.ಗಳು. ಕಾಫಿ, ಕರಿಮೆಣಸು, ಆಲೂಗೆಡ್ಡೆ, ಭತ್ತ ಮತ್ತು ಕಬ್ಬು ಇಲ್ಲಿನ ಪ್ರಮುಖ ಬೆಳೆಗಳು. ಜಿಲ್ಲೆಯು ಭಾಗಶಃ ಮಲೆನಾಡು ಹಾಗೂ ಭಾಗಶಃ ಬಯಲುಸೀಮೆಯ ಭಾಗಗಳನ್ನು ಹೊಂದಿದೆ. ಭೌಗೋಳಿಕ ಅಂಶಗಳು, ವಾತಾವರಣ, ಮಳೆ, ಇತ್ಯಾದಿ ಅಂಶಗಳನ್ನು ಗಮನಿಸಿದಾಗ ಜಿಲ್ಲೆಯನ್ನು ದಕ್ಷಿಣ ಮಲೆನಾಡು, ಅರೆಮಲೆನಾಡು ಮತ್ತು ದಕ್ಷಿಣ ಬಯಲು ಸೀಮೆ ಎಂದು ಮೂರು ಪ್ರದೇಶಗಳಾಗಿ ವಿಂಗಡಿಸಬಹುದು.