ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತೊಮ್ಮೆ ಕಾಂಗ್ರೆಸ್ ಪತನಗೊಳಿಸಲು ಯತ್ನಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ರಮೇಶ ಜಾರಕಿಹೊಳಿ ತಳ್ಳಿಹಾಕಿದ್ದಾರೆ.
ಆಪರೇಷನ್ ಕಮಲ ಮತ್ತು ಶಾಸಕರಿಗೆ 50 ಕೋಟಿ ಆಮಿಷ ನೀಡುತ್ತಿರುವ ಬಗ್ಗೆ ಮಾತನಾಡುತ್ತಿರುವುದು ಡಿ ಕೆ ಶಿವಕುಮಾರ್ ಅವರು ಮಾತನಾಡುತ್ತಿದ್ದಾರೆ, ಬಿಜೆಪಿಯವರು ‘ಆಪರೇಷನ್ ಕಮಲ’ದ ಬಗ್ಗೆ ಮಾತನಾಡುವುದಿಲ್ಲ ಮತ್ತು ಮಾಡುವುದಿಲ್ಲ, ‘ಆಪರೇಷನ್ ಕಮಲ’ ಎಂಬ ಪದವನ್ನು ಕಾಂಗ್ರೆಸ್ ಸೃಷ್ಟಿಸಿದೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರವನ್ನು ಈ ಹಿಂದೆ ಕಿತ್ತೊಗೆಯುವ ಅಗತ್ಯವಿತ್ತು ಎಂದು ಒಪ್ಪಿಕೊಂಡ ಜಾರಕಿಹೊಳಿ, ಹಾಗಾಗಿ ನಾವು ಅಂದು ಅದನ್ನು ಮಾಡಿದ್ದೇವು. ಬಿಜೆಪಿಯವರು ನಮಗೆ ಹಣ ನೀಡಿಲ್ಲ, ಆಮಿಷವೊಡ್ಡಿರಲಿಲ್ಲ ಎಂದು ಹೇಳಿದರು.
ನಾವು ಎಂದಿಗೂ ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಲ್ಲ, ಡಿಕೆ ಶಿವಕುಮಾರ್ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ನಾವು ಬಂಡಾಯವೆದ್ದು ಸರ್ಕಾರವನ್ನು ಉರುಳಿಸಿದೆವು. ನಾವು ಡಿಕೆ ಶಿವಕುಮಾರ್ ಅವರನ್ನು ವಿರೋಧಿಸಿದ್ದೇವು. ಇಂದು ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಏನೇನೋ ಹೇಳುತ್ತಾರೆ. ಅವರ ಹೇಳಿಕೆಗಳಲ್ಲಿ ಯಾವುದೇ ಆಧಾರವಿಲ್ಲ ಎಂದು ಜಾರಕಿಹೊಳಿ ಹೇಳಿದರು.
ಸುಳ್ಳು ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಸುಳ್ಳುಗಳನ್ನು ಹಬ್ಬಿಸುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡ ನಂತರವೇ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಸೀಟು ಹಂಚಿಕೆ ನಿರ್ಧಾರಕ್ಕೆ ನಾವು ಒಟ್ಟಿಗೆ ಮಾತನಾಡಬೇಕಿದೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ