ಆಧುನಿಕ AI ತಂತ್ರಜ್ಞಾನದೊಂದಿಗೆ ಓಡುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ತಂತ್ರಜ್ಞಾನ ಹಾಗೂ ಸಂಸ್ಕೃತಿಯನ್ನು ಒಳಗೊಂಡಿರುವ ಸಫಿಶಿಯೆಂಟ್ ಕಿಡ್ಸ್ ಅಕಾಡೆಮಿ ಎಂಬ ಪ್ರಿ ಸ್ಕೂಲ್ ಶಾಲೆಯೊಂದು 2025ರ ಶೈಕ್ಷಣಿಕ ವರ್ಷದಲ್ಲಿ ಮೈಸೂರಿನ ಬಳ್ಳಾಲ್ ವೃತ್ತದ ಬಳಿ ಇರುವ ಕೃಷ್ಣಮೂರ್ತಿಪುರಂನಲ್ಲಿ ಪ್ರಾರಂಭಗೊಳ್ಳುತ್ತಿದೆ.
ಸಫಿಶಿಯಂಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ವತಿಯಿಂದ 2025ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊಳ್ಳುತ್ತಿರುವ ಮೈಸೂರಿನ ನೂತನ ವಿದ್ಯಾಸಂಸ್ಥೆಯಾದ ಸಫಿಶಿಯಂಟ್ ಕಿಡ್ಸ್ ಅಕಾಡೆಮಿಯ “ಲೋಗೋ ಲಾಂಚ್” ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ತೀರದ ಪೂರ್ವವಾಹಿನಿಯಲ್ಲಿರುವ ಶ್ರೀ ದುರ್ದುಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ಡಿ.ಎಂ.ಎಸ್ ಚಂದ್ರಮನ ಆಶ್ರಮದಲ್ಲಿ ಆಯೋಜಿಸಲಾಗಿತ್ತು. ಶ್ರೀ ಮಠದ ಸಂಸ್ಥಾಪಕರಾದ ಶ್ರೀ ಶ್ರೀ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಸಫಿಶಿಯೆಂಟ್ ಕಿಡ್ಸ್ ಅಕಾಡೆಮಿ ಸಂಸ್ಥೆಯ ಲೋಗೋ ಅನಾವರಣವನ್ನು ನೆರವೇರಿಸಿದರು.

ಸಫೀಶಿಯಂಟ್ ಕಿಡ್ಸ್ ಅಕಾಡೆಮಿ ಶಾಲೆಯ ಲೋಗೋ ಅನಾವರಣಗೊಳಿಸಿ ಮಾತನಾಡಿದ ಮಹಾ ಸ್ವಾಮೀಜಿ ರವರು, AI ಯುಗದಲ್ಲಿ ಬಾಲ್ಯದಲ್ಲಿಯೇ ಮಕ್ಕಳ ವಿದ್ಯಾಭ್ಯಾಸವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ನಮ್ಮ ಮಣ್ಣಿನ ಸಿರಿ ಸಂಸ್ಕೃತಿಯನ್ನು ಬಾಲ್ಯದಿಂದಲೇ ಕಲಿಸುವ ಉದ್ದೇಶದೊಂದಿಗೆ ಸಂಸ್ಥೆಯು ಪ್ಲೇ ಗ್ರೂಪ್, ನರ್ಸರಿ, ಜೂನಿಯರ್ ಕೆಜಿ ಹಾಗೂ ಸೀನಿಯರ್ ಕೆಜಿ ತರಗತಿಗಳೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ಪ್ರಾರಂಭಗೊಳ್ಳುತ್ತಿರುವುದು ಸಂತೋಷದ ವಿಷಯವಾಗಿದ್ದು, ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ಸಫಿಶಿಯೆಂಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಫಿಶಿಯನ್ ಕಿಡ್ಸ್ ಅಕಾಡೆಮಿಯ ಅಧ್ಯಕ್ಷರಾದ ಅಲೋಕ್ ವರದರಾಜ್ ರವರು, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ನಿಮಿಷಾಂಬರವರು ಸೇರಿದಂತೆ ಸಂಸ್ಥೆಯ ನಿರ್ದೇಶಕರುಗಳು ಉಪಸ್ಥಿತರದ್ದರು.