ಒಂದು ರಾಜಕೀಯ ಪಕ್ಷದ ಕಾರ್ಯಕರ್ತ ಸಹಜವಾಗಿ ಬಯಸುವುದು ತನ್ನ ಸೇವೆಗೆ ಸೂಕ್ತ ಗೌರವ ಮಾತ್ರ.ಗೌರವವೆಂದರೆ ಸಮ್ಮಾನ,ಅಧಿಕಾರವನ್ನಲ್ಲ , ಅವನ ಕನಿಷ್ಠ ನಿರೀಕ್ಷೆ ತನ್ನ ಸೇವೆ ಹಾಗೂ ಶ್ರಮವನ್ನು ಗುರುತಿಸಿ ಪಕ್ಷದ ಪ್ರಮುಖರು ಅಥವಾ ಅಧಿಕಾರಸ್ಥ ಮುಖಂಡರು ಹೆಸರಿಡಿದು ಕರೆದರಷ್ಟೇ ಸಾಕು, ಅವನು ಧನ್ಯತಾಭಾವ ಹೊಂದುತ್ತಾನೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾರು ಗುರುತಿಸಲಿ ಬಿಡಲಿ ತನ್ನ ಸೇವೆ ಸಾರ್ಥಕವಾದರಷ್ಟೇ ಸಾಕು, ಈ ದೇಶ ಸುರಕ್ಷಿತವಾದರೆ ಸಾಕು ಎಂಬ ಆತ್ಮ ಸಂತೋಷವನ್ನು ಪಕ್ಷದ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿ ಸಂಭ್ರಮಪಡುತ್ತಾನೆ.
ದೇಶಭಕ್ತ ಕಾರ್ಯಕರ್ತರ ಬೃಹತ್ ಸಮೂಹವನ್ನು ಹೊಂದಿರುವ ರಾಜಕೀಯ ಪಕ್ಷವೊಂದು ಜಗತ್ತಿನಲ್ಲಿದ್ದರೆ ಅದು ಭಾರತೀಯ ಜನತಾಪಾರ್ಟಿ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ.ಕಾರ್ಯಕರ್ತರ ಅಮಿತೋತ್ಸಾಹ, ರಣೋತ್ಸಾಹ, ಶಿಸ್ತು, ಸಮರ್ಪಣೆಯನ್ನು ಹಲವಾರು ಬಾರಿ ಕಂಡಿದ್ದ ನನಗೆ ಕಾರ್ಯಕರ್ತರಲ್ಲಿ ತಮ್ಮ ಪಕ್ಷದ ಮುಖಂಡರ ಕುರಿತು ಯಾವ ಪರಿ ಅಭಿಮಾನ ಇರುತ್ತದೆಂಬುದಕ್ಕೆ ಕಳೆದ ಶನಿವಾರದ ರಾತ್ರಿಯ ಘಟನೆಯೊಂದರ ಅನುಭವ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು.
ಕಾರ್ಯಕ್ರಮವೊಂದನ್ನು ಮುಗಿಸಿ ದಾವಣಗೆರೆಯಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಕುಟುಂಬ ಸಮೇತ ಬರುವಾಗ ವಿಪರೀತ ಮಳೆಯ ನಡುವೆ ನೆಲಮಂಗಲದ ಬಳಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಳ್ಳಬೇಕಾಯಿತು. ರಾತ್ರಿ ೧೧-೪೫ರ ಸಮಯ. ಮುಂದೆ ತೆರಳುವಂತಿಲ್ಲ ಹಿಂದೆ ಸರಿಯುವಂತಿಲ್ಲದ ಪರಿಸ್ಥಿತಿಗೆ ಸಿಲುಕಿ ಸಂಚಾರಿ ನರಕಕ್ಕೆ ಸಿಲುಕಿದ ಪರಿಸ್ಥಿತಿ ನಮ್ಮದಾಗಿತ್ತು. ಏನಿಲ್ಲವೆಂದರೂ ಎರಡು-ಮೂರು ತಾಸು ಕಳೆದರೂ ಟ್ರಾಫಿಕ್ ಒತ್ತಡ ಕರಗದ ಪರಿಸ್ಥಿತಿ, ವಾಹನ ಮುಂದೋಗದ ಸ್ಥಿತಿಯ ಮಾಹಿತಿ ಪಡೆದು ವಿಪರೀತ ಚಡಪಡಿಕೆಯುಂಟಾಯಿತು,
ವಾಹನದೊಳಗೆ ಸಿಲುಕಿಕೊಂಡು ನಿದ್ರೆ ಗೆಡುವ ಪರಿಸ್ಥಿತಿಯುಂಟಾಯಿತು. ಈ ನಡುವೆ ಧೋ ಎಂದು ನಿರಂತರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ನಾಲ್ಕೈದು ಮಂದಿ ಒಟ್ಟಿಗೇ ಕಿಟಕಿ ಬಡಿಯಲಾರಂಭಿಸಿದರು. ಗ್ಲಾಸು ಕೆಳಗಿಳಿಸಿ ನೋಡಿದರೆ ಕಾರ್ ನಂಬರಿನ ಮೂಲಕ ನಮ್ಮನ್ನು ಪತ್ತೆ ಮಾಡಿದ್ದ ಪರಿಚಿತ ಕಾರ್ಯಕರ್ತರ ಮುಖಗಳು ನಮ್ಮನ್ನು ಆಪತ್ತಿನಿಂದ ರಕ್ಷಿಸಲು ಸಜ್ಜಾಗಿ ಬಂದ ಸೇನಾನಿಗಳಂತೆ ಕಂಡರು.
ವಾಹನದಟ್ಟಣೆಯ ಜತೆಗೇ ಆರ್ಭಟಿಸುತ್ತಿದ್ದ ಮಳೆಯನ್ನೂ ಹಿಮೆಟ್ಟಿಸುವ ಛಲ ಹೊತ್ತ ಯೋಧರಂತೆ ನಮ್ಮ ವಾಹನಕ್ಕೆ ಅಡಿಗಳಂತರದ ದಾರಿಮಾಡಿಸಿ ಬೇರೊಂದು ಮಾರ್ಗದ ಮೂಲಕ ಬೆಂಗಳೂರು ತಲುಪಲು ಹರಸಾಹಸಗೈದರು. ಸುರಕ್ಷಿತವಾಗಿ ಮನೆ ತಲುಪಿದ ನಂತರ ನನಗೆ ಬಹುಹೊತ್ತಿನವರೆಗೂ ನಿದ್ದೆ ಹತ್ತಲಿಲ್ಲ, ಕಾರ್ಯಕರ್ತರ ಅರ್ಪಣಾ ಮನೋಭಾವದ ಆ ಸ್ಪಂದನೆ,ವಹಿಸಿದ ಶ್ರಮ ನನ್ನನ್ನು ಸ್ತಂಭೀಭೂತನನ್ನಾಗಿಸಿತು. ಇವರಿಗೆಲ್ಲ ನಾವು ಏನುಕೊಟ್ಟಿದ್ದೇವೆ? ಏನು ಮಾಡಲಾದೀತು? ಯಾಕಿಷ್ಟು ಇವರಿಗೆ ಪಕ್ಷ, ಮುಖಂಡರು, ಹಿರಿಯರನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ, ಗೌರವ ಎಂಬ ಪ್ರಶ್ನೆ ನನ್ನನ್ನು ಬಹುವಾಗಿ ಕಾಡಿತು. ಬೇಕಿದ್ದರೆ ನನ್ನ ವಾಹನವನ್ನು ಗಮನಿಸಿಯೂ ಆ ಮಳೆಯಲ್ಲಿ ಇಲ್ಲದ ಉಸಾಬರಿ ನಮಗೇಕೆ ಎಂದು ಆ ಕಾರ್ಯಕರ್ತರು ನಮ್ಮ ಸನಿಹ ಬರದಿದ್ದರೆ ನಮಗೇನು ತಿಳಿಯುತ್ತಲೂ ಇರಲಿಲ್ಲ. ಕಾರಿನಲ್ಲಿರುವವರು ನಮ್ಮ ಪಕ್ಷದ ವಿಜಯೇಂದ್ರ ಎಂದು ನನ್ನನು ಗುರುತಿಸಿ ಪ್ರೀತಿಯಿಂದ ಅವರೇಕೆ ಅಪಾಯವನ್ನೂ ಲೆಕ್ಕಿಸದೇ ನಮಗಾಗಿ ಶ್ರಮ ತೆಗೆದುಕೊಂಡರು ?ಎಂಬುದು ನನ್ನ ಮನಸ್ಸಿನಾಳದಲ್ಲಿ ಏಳುತ್ತಿದ್ದ ತಾರ್ಕಿಕ ಪ್ರಶ್ನೆಯಾಗಿತ್ತು. ಹೊಸಕೋಟೆ ಮೂಲದ ಆ ಕಾರ್ಯಕರ್ತ ಸಹೋದರರ ಸ್ಪಂದನೆ ಹಾಗೂ ಸಹಾಯ ನಾನೆಂದೂ ಮರೆಯಲಾಗದು.
ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಸಂಘಟನೆಯಲ್ಲಿ ಹಂತ ಹಂತವಾಗಿ ಜವಾಬ್ದಾರಿ ಸಿಗಬಹುದು ಆ ಮೂಲಕ ಅವನು ಜನಪರ ನಾಯಕನಾಗಿ ಹೊರಹೊಮ್ಮಲೂ ಬಹುದು,ಪಕ್ಷದ ಸಿದ್ಧಾಂತವನ್ನು ದೇಶ ಕಟ್ಟುವ ಸಲುವಾಗಿ ಸಾಕಾರಗೊಳಿಸಲು ಅಧಿಕಾರ ಸಿಗಲೂ ಬಹುದು ಆದರೆ ಎಷ್ಟು ಜನ ಕಾರ್ಯಕರ್ತರಿಗೆ ಇಂಥಾ ಅವಕಾಶಗಳು ಲಭಿಸಲು ಸಾಧ್ಯ? ಅದೆಷ್ಟೋ ಕಾರ್ಯ ಕರ್ತರು ಏನೂ ಆಗದೇ ಕಾರ್ಯಕರ್ತ ಎಂಬ ಹೆಮ್ಮೆಯ ಹಣೆಪಟ್ಟಿ ಹೊತ್ತು ಕೊನೆಯಾದವರಿದ್ದಾರೆ, ಅದೇ ರೀತಿ ದೇಶ ವಿರೋಧಿ ನರರಕ್ಷಾಸರಿಂದ ಬಲಿಯಾಗುತ್ತಲೂ ಇದ್ದಾರೆ ಎಂಬುದನ್ನು ಪಕ್ಷ ಕಟ್ಟುವ ಮುಂಚೂಣಿಯಲ್ಲಿರುವವರು ಹಿಂದೆಂದಿ ಗಿಂತಲೂ ಗಂಭೀರವಾಗಿ ಚಿಂತಿಸುವ ಕಾಲ ಸದ್ಯ ಎದುರಾಗಿದೆ.
ದಕ್ಷಿಣ ಕನ್ನಡದ ಸುಳ್ಯಾ ತಾಲ್ಲೂಕಿನ ಬೆಳ್ಳಾರೆ ಯಲ್ಲಿ ವಿದ್ರೋಹಿ ಪಾತಕಿಗಳಿಂದ ಅಮಾನುಷವಾಗಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಸಾವು ಯುವ ಮೋರ್ಚಾ ಕಾರ್ಯಕರ್ತರಲ್ಲಿ ಆಕ್ರೋಶದ ಕಟ್ಟೆಯೊಡದಿದ್ದರೆ ,ಅವರ ಅಸಹನೆ ಎಲ್ಲೆ ಮೀರಿದ್ದರೆ, ಆವೇಶ ಗೊಂಡ ಯುವ ಮನಸ್ಸುಗಳು ಸರಣೀ ರಾಜಿನಾಮೆ ನೀಡುವ ಹಂತಕ್ಕೆ ತಲುಪಿದ್ದರೆ ,ಅದರ ಹಿಂದಿರುವ ಹತಾಶೆಗೆ ನೈಜ ಕಾರಣ ಏನಿರಬಹುದೆಂದು ಹುಡುಕಬೇಕಿದೆ. ಅವರ ಸಿಟ್ಟು ಸೆಡವುಗಳೆಲ್ಲಾ ಪಕ್ಷದ ಮೇಲಲ್ಲ, ನಾಯಕರ ಮೇಲೂ ಅಲ್ಲ, ಸರ್ಕಾರದ ಮೇಲೂ ಅಲ್ಲ, ಪ್ರತಿ ಕಾರ್ಯಕರ್ತ, ಪಕ್ಷದ ಒಂದೊಂದು ಆಧಾರ ಸ್ತಂಭ, ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ಭಾರತ ಕಟ್ಟುವ ಸಂಕಲ್ಪದ ಕನಸುಗಾರರು,ಒಂದೆಡೆ ಯೋಧರು ದೇಶದ ಗಡಿಕಾಯುತ್ತಿದ್ದರೆ,ನಮ್ಮ ಕಾರ್ಯಕರ್ತರು ದೇಶದೊಳಗಿನ ಭಾರತೀಯತೆಯ ಕೋಟೆ ಕಾಯುತ್ತಿರುವ ಸೈನಿಕರಂತೆ ತಮ್ಮನ್ನು ಸಮರ್ಪಿಸಿಕೊಂಡ ಶಿಸ್ತಿನ ಸಿಪಾಯಿಗಳು, ಅವರ ಉದ್ದೇಶ ಎಂದೂ ಅಧಿಕಾರದ ಬೆನ್ನು ಏರುವುದಲ್ಲ? ಬಲಿಷ್ಠ ಭಾರತಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೊಂದೇ ಗುರಿಯಾಗಿರುತ್ತದೆ. ಆದರೆ ದೇಶ ವಿರೋಧಿ ಪಾತಕಿಗಳು ಯಾವ ಎಗ್ಗೂ ಇಲ್ಲದೇ ನಮ್ಮ ಒಬ್ಬೊಬ್ಬ ದೇಶಭಕ್ತ ಪಕ್ಷದ ಕಾರ್ಯಕರ್ತರನ್ನು ಸರಣಿಯಾಗಿ ಕುರಿ, ಕೋಳಿ ಕತ್ತರಿಸುವ ಹಾಗೆ ಹತ್ಯೆಗೈಯುತ್ತಿರುವ ಪರಿ ಅವರಲ್ಲಿ ಆಕ್ರೋಶದ ಒಡಲುರಿ ಹೆಚ್ಚಲು ಕಾರಣ ವಾಗಿರಬಹುದು, ಅಸುರಕ್ಷತೆಯ ಭಾವ ಮೂಡಿರಲೂಬಹುದು.
ಕಾರ್ಯಕರ್ತರ ಪಕ್ಷ ಎಂಬ ಬಿಜೆಪಿಗೆ ಪ್ರತಿ ಕಾರ್ಯಕರ್ತನೂ ಬಾಹುಬಲಿ ಇದ್ದಂತೆ, ಒಬ್ಬ ಕೆಚ್ಚೆದೆಯ ಕಾರ್ಯಕರ್ತನ ಅಗಲಿಕೆ ಪಕ್ಷಕ್ಕೆಷ್ಟು ನಷ್ಟ ಎಂಬ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯಲಿ, ಕಾರ್ಯಕರ್ತರ ರಕ್ಷಣೆಗೆ ವಿಶೇಷ ಕ್ರಮ ವಹಿಸಲಿ ಎಂಬ ಒತ್ತಾಯವೂ ಇರಬಹುದು? ದುಷ್ಟರ ಅಟ್ಟಹಾಸದ ಬೆನ್ನು ಮುರಿಯುವ ಯೋಜನೆ ರೂಪಿಸುವಲ್ಲಿ ತಡವಾಗುತ್ತಿದೆ ? ಎಂಬ ಅಸಹನೆ ಅವರಲ್ಲಿ ಮನೆ ಮಾಡಿರಬಹುದು? ಎದುರು ಬಂದು ಹೆದರಿಸಲಾಗದೇ ಹೊಂಚು ಹಾಕಿ ಹೇಡಿಗಳ ರೀತಿ ಹತ್ಯೆಗೈಯುತ್ತಿರುವ ದುಷ್ಟ ಪಾತಕಿಗಳಿಗೆ ಬಲಿಯಾಗುತ್ತಿರುವ ಕಾರ್ಯಕರ್ತ ಕುಟುಂಬಗಳ ಸ್ಥಿತಿ ನೆನೆದು ಅವರು ಆತಂಕಿತರಾಗಿರಬಹುದು? “ಕಷ್ಟಪಟ್ಟು ಕಟ್ಟುವ ಜೇನುಗೂಡಿಗೆ ಕಲ್ಲು ಹೊಡೆದರೆ ಜೇನುಗಳು ಸಹಿಸಿ ಕೂರಲು ಸಾಧ್ಯವೇ ?” ಇದೇ ಪರಿಸ್ಥಿತಿ ನಮ್ಮ ಕಾರ್ಯಕರ್ತರದ್ದಾಗಿದೆ. ಇದೇನೇ ಇದ್ದರೂ ಪಕ್ಷ ಹಾಗೂ ಸರ್ಕಾರದ ಕುರಿತ ಕಾರ್ಯಕರ್ತರ ಸಿಟ್ಟು ಸಾತ್ವಿಕ ಹಾಗೂ ಸಾಂಧರ್ಬಿಕ ಎಂದು ಪಕ್ಷ ಭಾವಿಸಿದೆ. ಮುನಿದು ಕೊಳ್ಳವ ಮಕ್ಕಳ ವರ್ತನೆಯಂತೆ ಇದನ್ನೂ ಪರಿಗಣಿಸಿದೆ, ಹಾಗೆಯೇ ಪ್ರವೀಣ್ ನೆಟ್ಟಾರು ಪ್ರಕರಣದ ನಂತರವಂತೂ ಹಿಂದೆಂದಿಗಿಂತಲೂ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಸವಾಲು ಎಂಬಂತೆ ಸ್ವೀಕರಿಸಿದೆ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತನೂ ಭಾರತೀಯ ಜನತಾ ಪಾರ್ಟಿಯ ಆಸ್ತಿ ಎಂದೇ ಪಕ್ಷ ಯಾವತ್ತೂ ಪರಿಗಣಿಸಿದೆ. ಈ ನಿಟ್ಟಿನಲ್ಲಿ ದೇಶ ವಿರೋಧಿ ಉಗ್ರ ಶಕ್ತಿಗಳ ಚಟುವಟಿಕೆಗಳಿಗೆ ಶಾಶ್ವತ ಕಡಿವಾಣ ಹಾಕುವ ಕಾಲ ಬಲು ಸನ್ನಿಹಿತವಾಗಿದೆ ಎಂಬ ಬಗ್ಗೆ ಕಾರ್ಯಕರ್ತ ಬಂಧುಗಳು ವಿಶ್ವಾಸವಿರಿಸಿಕೊಳ್ಳಬೇಕಿದೆ.
ಭಾರತೀಯ ಜನತಾ ಪಾರ್ಟಿ ಮಹಾ ವೃಕ್ಷದಂತೆ ಇಂದು ಬೆಳೆದು ನಿಲ್ಲಬೇಕಾದರೆ ಅದು ಕಾರ್ಯಕರ್ತರ ತ್ಯಾಗ, ಬಲಿದಾನ, ಹೋರಾಟದಿಂದಾಗಿ ಮಾತ್ರ ಎಂಬುದು ಐತಿಹಾಸಿಕ ಸತ್ಯ. ಪ್ರಧಾನಿ ಇರಲಿ,ಮುಖ್ಯಮಂತ್ರಿ ಇರಲಿ ಅಥವಾ ಇನ್ನಾವುದೇ ಹುದ್ದೆಯಲ್ಲಿರಲಿ ಆ ವ್ಯಕ್ತಿ ಪಕ್ಷದ ಪಾಲಿಗೆ ಮೊದಲು ಕಾರ್ಯಕರ್ತ ನಂತರವಷ್ಚೇ ಉಳಿದ ಜವಾಬ್ದಾರಿಗಳು ಎಂಬುದನ್ನು ಅಟಲ್ ಜೀ, ಅದ್ವಾನಿ ಜೀ ಯವರಿಂದಿಡಿದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ ರವರ ವರಗೆ, ಕರ್ನಾಟಕದಲ್ಲಿ ಮಾನ್ಯ ಯಡಿಯೂರಪ್ಪ ನವರಿಂದಿಡಿದು ಅನೇಕ ಹಿರಿಯ ಮುಖಂಡರುಗಳವರೆಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಈ ಸಂದರ್ಭದಲ್ಲಿ ನೆನಪಾಗುತ್ತಿರುವ ಘಟನೆಯೊಂದನ್ನು ಇಲ್ಲಿ ಹೇಳಲೇಬೇಕಿದೆ. ಪೂಜ್ಯ ತಂದೆಯವರು ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದಾಗ ನಮ್ಮ ಕುಟುಂಬದ ಸದಸ್ಯರನ್ನೆಲ್ಲಾ ದೇವರ ಮನೆಗೆ ಕರೆದೊಯ್ದು ಹೇಳಿದ್ದು ಒಂದೇ ಮಾತು,
“ನೋಡಿ ನಾನು ಎಂದೂ ಮಂತ್ರಿಯಾಗುತ್ತೇನೆ. ಮುಖ್ಯಮಂತ್ರಿಯಾಗುತ್ತೇನೆ ಎಂದು ಪಕ್ಷ ಕಟ್ಟುವ ಕೆಲಸ ಮಾಡಲ್ಲಿಲ್ಲ, ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬೆಳೆಸಬೇಕು ಎಂಬ ಸಂಕಲ್ಪ ತೊಟ್ಟು ಹೋರಾಟ, ಸಂಘಟನೆ ಮಾಡಿದವನು ನಾನು, ನನ್ನ ಜತೆ ಸಂಘಟನೆ – ಹೋರಾಟದಲ್ಲಿ ಹೆಜ್ಜೆಹಾಕಿ ಸಮರ್ಪಿಸಿಕೊಂಡ ಲಕ್ಷಾಂತರ ಕಾರ್ಯಕರ್ತರಿದ್ದಾರೆ, ಹಿರಿಯರಿದ್ದಾರೆ, ಸ್ನೇಹಿತರಿದ್ದಾರೆ. ಅವರೆಲ್ಲರ ಬೆವರ ಹನಿಯ ಶ್ರಮ, ಅದರಲ್ಲೂ ಕಾರ್ಯಕರ್ತರ ತ್ಯಾಗದ ಫಲ ನಿಮ್ಮಪ್ಪ ಇಂದು ಮುಖ್ಯಮಂತ್ರಿಯಾಗಲು ಪ್ರಮಾಣವಚನ ಸ್ವೀಕರಿಸಲು ತೆರಳುತ್ತಿದ್ದಾನೆ, ನನ್ನ ಒತ್ತಡದಲ್ಲಿ, ಸಮಯದ ಅಭಾವದಲ್ಲಿ ನಾನು ಕಾರ್ಯಕರ್ತರನ್ನು ಗಮನಿಸಲು ಕೆಲವೊಮ್ಮೆ ಸಾಧ್ಯವಾಗದಿರಬಹುದು, ಆದರೆ ಮನೆಬಾಗಿಲಿಗೆ ಬರುವ ಯಾವುದೇ ಕಾರ್ಯಕರ್ತ ಕಿಂಚಿತ್ತೂ ಬೇಸರಪಟ್ಟುಕೊಳ್ಳದಂತೆ ಕಾಳಜಿ ವಹಿಸುವ ಜವಾಬ್ದಾರಿ ನಿಮ್ಮದು, ಅದರಲ್ಲಿ ಎಳ್ಳಷ್ಟೂ ಲೋಪ ಉಂಟಾದರೂ ನಾನು ಸಹಿಸಲಾರೆ ನೀವು ಎಚ್ಚರವಹಿಸಿ ಆದರ ತೋರಬೇಕು”ಎಂದು ನಮಗೆಲ್ಲಾ ಉಪದೇಶ ನೀಡಿದ್ದರು.
ಅಂದಿನಿಂದ ಇಂದಿನವರೆಗೂ ತಂದೆಯವರ ಮಾತನ್ನು ಗುರು ಉಪದೇಶದಂತೆ ಪಾಲಿಸಿಕೊಂಡು ನಾವು ಬಂದಿದ್ದೇವೆ. ತಂದೆಯವರ ಕಾರ್ಯಗಳಿಗೆ ನೆರಳಾಗಿ ಸಹಕಾರನೀಡುತ್ತಿದ್ದ ನಮ್ಮ ತಾಯಿಯ ಮಾರ್ಗದರ್ಶನದಲ್ಲಿ ಸಂಘಟನೆಯ ಕೆಲಸಗಳಿಗೆ ಹಾಗೂ ಮನೆಗೆ ಬರುತ್ತಿದ್ದ ಹಿರಿಯರು ಹಾಗೂ ಕಾರ್ಯಕರ್ತರುಗಳ ಆತಿಥ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದ ನಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಮನೆಯೇ ಪಕ್ಷದ ಕಛೇರಿಯಂತಾಗಿತ್ತು. ಈ ಹಿನ್ನಲೆಯಲ್ಲಿ ನಾನು ಹಾಗೂ ಅಣ್ಣ ರಾಘಣ್ಣನಿಗೆ ಸಂಘದ ಸಂಸ್ಕಾರ ಪಡೆಯುವ ಮಹದವಕಾಶ ದೊರೆತ್ತದ್ದು ‘ಸಾಮಾನ್ಯ ಕಾರ್ಯಕರ್ತನೆಂಬ’ಭಾವ ನಮ್ಮಲ್ಲಿ ಸದಾ ಜಾಗೃತವಾಗಿರಲು ಕಾರಣವಾಗಿದೆ.
ಮೊನ್ನೆ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರನ್ನು ಕಾಣುವ ಸಲುವಾಗಿ ಬೆಳ್ಳಾರೆಗೆ ಹೋದಾಗ ಕಾರ್ಯಕರ್ತರ ಆಕ್ರೋಶದ ತಾಪ ತಣ್ಣಗಾಗಿರಲಿಲ್ಲ, ಆದರೂ ಪೊಲೀಸರ ಎಚ್ಚರಿಕೆಯ ನಡುವೆಯೂ ನಾನೊಬ್ಬ ಕಾರ್ಯಕರ್ತನೆಂಬ ಭಾವ ನನ್ನಲ್ಲಿ ಬಲವಾಗಿ ಬೇರೂರಿದ್ದರಿಂದ ನನ್ನದೇ ಮನೆಗೆ ಭೇಟಿ ನೀಡುತ್ತಿದ್ದೇನೆಂಬ ಆತ್ಮ ವಿಶ್ವಾಸದಿಂದ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರನ್ನು ಭೇಟಿಯಾದೆ. ಸ್ಥಳೀಯ ಕಾರ್ಯಕರ್ತ ಬಂಧುಗಳು ನೋವಿನ ನಡುವೆಯೂ ಆತ್ಮೀಯತೆ ತೊರಿದ್ದು ನನ್ನನ್ನು ಭಾವುಕನನ್ನಾಗಿಸಿತು.
“ಪ್ರವೀಣ್ ಇಲ್ಲದ ನನ್ನ ಜೀವನ ಹೇಗೋ ಸಾಗಬಹುದು ,ಬದುಕು ಎದುರಿಸವ ಆತ್ಮವಿಶ್ವಾಸ ನನ್ನಲಿದೆ. ಆದರೆ ಪ್ರವೀಣ್ ಸ್ಥಿತಿ ಇನ್ಯಾವ ಕಾರ್ಯಕರ್ತನಿಗೂ ಬಾರದ ರೀತಿಯಲ್ಲಿ ನೋಡಿಕೊಳ್ಳಿ, ಆ ಕಾರ್ಯಕರ್ತರ ಕುಟುಂಬ ಶಾಶ್ವತ ಅನಾಥ ಪ್ರಜ್ಞೆ ಅನುಭವಿಸುವ ಪರಿಸ್ಥಿತಿ ಬಾರದಂತೆ ಇನ್ನಾದರೂ ಎಚ್ಚರ ವಹಿಸಿ” ಎಂಬ ಪ್ರವೀಣ್ರ ಪತ್ನಿ ಸಹೋದರಿ ನೂತನ ಅವರು ಆಡಿದ ಮಾತುಗಳು ನನ್ನ ಮನದಲ್ಲಿ ಮತ್ತೆ ,ಮತ್ತೆ ಮಾರ್ದನಿಸುತ್ತಿದೆ.
ಒಬ್ಬ ನಿಜವಾದ ಕಾರ್ಯಕರ್ತ ಪಕ್ಷದ ಆಧಾರ ಸ್ತಂಭ, ಅಪ್ರತಿಮ ದೇಶಭಕ್ತ, ತನ್ನ ಕುಟುಂಬದ ಹಿತವನ್ನೂ ಲೆಕ್ಕಿಸದೇ ತನ್ನನ್ನು ತಾನು ಸಮರ್ಪಣೆ ಮಾಡಿಕೊಂಡ ಮಹಾಸೇವಕ. ಅಂತೆಯೇ ಪಕ್ಷದಲ್ಲಿ ಹಿರಿಯರಿರಲಿ,ಅಧಿಕಾರ ವರ್ಗದವರಿರಲಿ, ಎಲ್ಲರೂ ತಾವೊಬ್ಬ ಸಾಮಾನ್ಯ ಕಾರ್ಯಕರ್ತನೆಂಬ ಭಾವನೆ ಹೊಂದಿರುವವರು ಎಂಬ ವಾಸ್ತವ ಸತ್ಯ ನೋವಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತನ ಅರಿವಿಗಿರಲಿ. ಪ್ರತಿ ಕಾರ್ಯಕರ್ತನ ಕಷ್ಟ-ನಷ್ಟ, ಮಾನ-ಪ್ರಾಣಗಳನ್ನು ತನ್ನದೇ ಎಂದು ಪರಿಗಣಿಸುವ ಕೌಟುಂಬಿಕ ವ್ಯವಸ್ಥೆ ಬಿಜೆಪಿಯದು ಎಂಬ ಪ್ರಜ್ಞೆ ಕಾರ್ಯಕರ್ತರಾದ ನಮ್ಮೆಲ್ಲರಲ್ಲೂ ಇರಲಿ.
ನಮ್ಮ ಸಾಂದರ್ಭಿಕ ನಡೆ-ನುಡಿಗಳು ವಿವೇಚನೆಯ ಎಲ್ಲೆ ಮೀರಿದರೆ ಅದು ನಮ್ಮ ಕಾಲನ್ನೇ ಸುಡಬಹುದು ಎಂಬ ಎಚ್ಚರವೂ ಇರಲಿ.