ಹಾಸನ ಜಿಲ್ಲೆ

Halebeedu

ಕರ್ನಾಟಕದ ನೈರುತ್ಯ ದಿಕ್ಕಿನಲ್ಲಿರುವ ಒಂದು ಜಿಲ್ಲೆ ಹಾಸನ.  ಜಿಲ್ಲೆಯು ಶ್ರೀಮಂತ ಇತಿಹಾಸ ಹಾಗೂ ಸ್ಮರಣೀಯ ಘಟನೆಗಳಿಂದ ಕೂಡಿದೆ.  ಬೇಲೂರು ತಾಲ್ಲೂಕಿನ ಈಗಿನ ಹಳೇಬೀಡಾಗಿರುವ ಹಿಂದಿನ ದ್ವಾರಸಮುದ್ರವನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಹೊಯ್ಸಳ ಚಕ್ರವರ್ತಿಗಳ ಅಧಿಕಾರವಧಿಯಲ್ಲಿ ಈ ಜಿಲ್ಲೆಯು ತನ್ನ ವೈಭವದ  ಉತ್ತುಂಗವನ್ನು ತಲುಪಿತ್ತು.  ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿ  ಇರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆ ತವರಾಗಿದೆ. ಜೈನಸ್ಮಾರಕಗಳಿವೆ. ಶ್ರವಣಬೆಳಗೊಳ ಜಿಲ್ಲೆಯಲ್ಲಿರುವ ಜೈನರ ಸುಪ್ರಸಿದ್ಧ ಯಾತ್ರಾಸ್ಥಳವಾಗಿದೆ.

ಹೆಸರಿನ ಮೂಲ: ಜಿಲ್ಲೆಯನ್ನು ಕೇಂದ್ರ ಕಾರ್ಯಸ್ಥಾನದ ಪಟ್ಟಣ ಹಾಸನ ಹೆಸರಿನಿಂದಲೇ ಕರೆಯಲ್ಪಡುತ್ತಿದೆ.  ಸ್ಥಳಪುರಾಣದ ಪ್ರಕಾರ ಹಾಸನ ‘ಸಿಂಹಾಸನಪುರ’ದ ಸಂಕ್ಷಿಪ್ತನಾಮ.  ಪಾಂಡವರ ಪೈಕಿ ಅರ್ಜುನನ ಮರಿಮೊಮ್ಮಗನಾದ ಜನಮೇಜಯನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.  ಆದರೆ ಬಹಳ ಜನಗಳ ನಂಬಿಕೆಯ ಪ್ರಕಾರ ಇಲ್ಲಿಯ ಅಧಿದೇವತೆ ಹಾಸನಮ್ಮ ಅಥವಾ ಹಾಸನಾಂಬೆ ಅಂದರೆ ಕನ್ನಡದಲ್ಲಿ ‘ನಗೆಮೊಗದ’ (ಹಸನ್ಮುಖಿ) ತಾಯಿ ಅಥವಾ ದೇವತೆಯಿಂದ “ಹಾಸನ” ಎಂಬ ಹೆಸರು ಬಂದಿದೆ.  ಈ ಸಂದರ್ಭದಲ್ಲಿ ದೇವತೆ ಹಾಸನಾಂಬೆಯು ಈ ಸ್ಥಳಕ್ಕೆ ಹೇಗೆ ಬಂದಳೆನ್ನುವುದಕ್ಕೆ ಒಂದು ಸಾಂಪ್ರದಾಯಿಕ ಕಥೆ ಇಂತಿದೆ – ಒಮ್ಮೆ ಸಪ್ತ ಮಾತೃಕೆಯರು ವಾರಾಣಾಸಿಯಿಂದ (ಕಾಶಿ) ದಕ್ಷಿಣ ದಿಕ್ಕಿಗೆ ಪ್ರಯಾಣಿಸುವಾಗ, ಈ ಪ್ರದೇಶದ ರಮಣೀಯತೆಗೆ ಮಾರುಹೋಗಿ ಇಲ್ಲೇ ನೆಲೆಸುವ ನಿರ್ಧಾರ ಮಾಡಿದರು.  ಆ ಪ್ರಕಾರ, ಸಹೋದರಿಯರಾದ ಸಪ್ತಮಾತೃಕೆಯರಲ್ಲಿ ಮೂವರು ಹಾಸನದಲ್ಲಿ ನೆಲೆಸಿದರು.  ಇನ್ನು ಮೂವರು ಹಾಸನ ನಗರದಲ್ಲಿರುವ ದೇವಿಗೆರೆಯಲ್ಲಿ (ಕೆರೆ) ನೆಲೆಸಿದರು.  ಅವರನ್ನು ಹಾಸನಾಂಬಾ ಎಂದು ಕರೆಯಲಾಗುತ್ತದೆ.  ಇನ್ನೊಬ್ಬರು ಕೆಂಚಾಂಬಾ ಎಂಬ ಹೆಸರಿನಿಂದ, ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಎಂಬಲ್ಲಿ ಅರಣ್ಯದಲ್ಲಿ ನೆಲೆಸಿದರು.

ಜಿಲ್ಲೆಯು  ಒಟ್ಟು 6826.15 ಚದರ ಕಿ.ಮೀ ವಿಸ್ತೀರ್ಣವಿದೆ.  ಜಿಲ್ಲೆಯ ಅತ್ಯಧಿಕ ಉದ್ದ ದಕ್ಷಿಣದಿಂದ ಉತ್ತರಕ್ಕೆ 129 ಕಿ.ಮೀ ಹಾಗೂ ಅತ್ಯಧಿಕ ಅಗಲ ಪೂರ್ವದಿಂದ ಪಶ್ಚಿಮಕ್ಕೆ 116 ಕಿ.ಮೀ.ಗಳು.  8 ತಾಲ್ಲೂಕು, 38 ಹೋಬಳಿಗಳು ಹಾಗೂ 2369 ಗ್ರಾಮಗಳಿವೆ. ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 6845 ಚದರ ಕಿ.ಮೀ.ಗಳು.  ಇಲ್ಲಿನ ಜನಸಂಖ್ಯೆ 15.67 ಲಕ್ಷ ಮತ್ತು ಸರಾಸರಿ ಮಳೆ ವಾರ್ಷಿಕ 1031 ಮಿ.ಮಿ.ಗಳು.  ಕಾಫಿ, ಕರಿಮೆಣಸು, ಆಲೂಗೆಡ್ಡೆ, ಭತ್ತ ಮತ್ತು ಕಬ್ಬು ಇಲ್ಲಿನ ಪ್ರಮುಖ ಬೆಳೆಗಳು.  ಜಿಲ್ಲೆಯು ಭಾಗಶಃ ಮಲೆನಾಡು ಹಾಗೂ ಭಾಗಶಃ ಬಯಲುಸೀಮೆಯ ಭಾಗಗಳನ್ನು ಹೊಂದಿದೆ. ಭೌಗೋಳಿಕ ಅಂಶಗಳು, ವಾತಾವರಣ, ಮಳೆ, ಇತ್ಯಾದಿ ಅಂಶಗಳನ್ನು ಗಮನಿಸಿದಾಗ ಜಿಲ್ಲೆಯನ್ನು ದಕ್ಷಿಣ ಮಲೆನಾಡು, ಅರೆಮಲೆನಾಡು ಮತ್ತು ದಕ್ಷಿಣ ಬಯಲು ಸೀಮೆ ಎಂದು ಮೂರು ಪ್ರದೇಶಗಳಾಗಿ ವಿಂಗಡಿಸಬಹುದು. 

ಬೇಲೂರು ತಾಲ್ಲೂಕಿನ ಪಶ್ಚಿಮ ಮತ್ತು ಪೂರ್ವೋತ್ತರ ಭಾಗಗಳು, ಆಲೂರು ತಾಲ್ಲೂಕಿನ ಪಶ್ಚಿಮ ಮತ್ತು ಮಧ್ಯ ಪ್ರದೇಶಗಳು, ಮತ್ತು ಸಕಲೇಶಪುರ ತಾಲ್ಲೂಕಿನ ಸಂಪೂರ್ಣ ಭೂ ಪ್ರದೇಶ, ದಕ್ಷಿಣ ಮಲೆನಾಡು ಆಗುತ್ತದೆ.  ಅರಕಲಗೂಡು ತಾಲ್ಲೂಕಿನ ಮಧ್ಯಭಾಗಗಳು, ಹಾಸನ ತಾಲ್ಲೂಕಿನ ಪಶ್ಚಿಮ ಭಾಗ, ಆಲೂರು ತಾಲ್ಲೂಕಿನ ಪೂರ್ವ ಭಾಗ, ಬೇಲೂರು ತಾಲ್ಲೂಕಿನ ಮಧ್ಯ- ಪೂರ್ವ ಭಾಗಗಳು ಮತ್ತು ಅರಸೀಕೆರೆ ತಾಲ್ಲೂಕಿನ ಪಶ್ಚಿಮ ಭಾಗಗಳು “ಅರೆಮಲೆನಾಡು” ಪ್ರದೇಶ ಆಗುತ್ತವೆ. ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳನ್ನು ಸಂಪೂರ್ಣವಾಗಿ, ಅರಸೀಕೆರೆ ಮತ್ತು ಹಾಸನ ತಾಲ್ಲೂಕುಗಳ ಪೂರ್ವ ಭಾಗಗಳು ಮತ್ತು ಅರಕಲಗೂಡು ತಾಲ್ಲೂಕಿನ ಆಗ್ನೇಯ ಭಾಗಗಳು ದಕ್ಷಿಣದ ಬಯಲು ಪ್ರದೇಶವಾಗುತ್ತವೆ.  ದಕ್ಷಿಣದ ಮಲೆನಾಡು ಭಾಗವು ದಟ್ಟ ಅರಣ್ಯದಿಂದ ಬೆಟ್ಟಗುಡ್ಡಗಳಿಂದ ಕೂಡಿದ್ದು, ಭಾರಿ ಮಳೆಯ ಪ್ರದೇಶವಾಗಿದೆ.

ಜನಸಂಖ್ಯೆ ಮತ್ತು ಬೆಳವಣಿಗೆ:   2001ರ ಜನಗಣತಿಯ ಪ್ರಕಾರ, ಜಿಲ್ಲೆಯ ಜನಸಂಖ್ಯೆ 17,21,669 ಇತ್ತು.  ಅದರಲ್ಲಿ, 14,16,996 ಗ್ರಾಮೀಣ ಜನಸಂಖ್ಯೆಯಿದೆ. 3,04,673 ನಗರ ಜನಸಂಖ್ಯೆಯಾಗಿತ್ತು.  1981ರ ಜನಗಣತಿ ಪ್ರಕಾರ (1,35,704) ಪಟ್ಟಣ ಹಾಗೂ ಗ್ರಾಮೀಣ ಜನಸಂಖ್ಯೆಯು ಕ್ರಮವಾಗಿ ಜನಸಂಖ್ಯೆಯ ಶೇ 85.37 ಮತ್ತು ಶೇ 14.62 ಇತ್ತು.  ಜನಸಾಂದ್ರತೆಯು ತಾಲ್ಲೂಕುಗಳ ನಡುವೆ ಗಣನೀಯವಾಗಿ ವ್ಯತ್ಯಾಸವಿದೆ.  2001ರ ಜನಗಣತಿಯ ಪ್ರಕಾರ, ಹಾಸನ ತಾಲ್ಲೂಕು ಪ್ರತಿ ಚ.ಕಿ.ಮೀಗೆ 385ರಂತೆ ಪಟ್ಟಿಯ ಅಗ್ರಸ್ಥಾನದಲ್ಲಿದ್ದರೆ, ನಂತರ ಅರಕಲಗೂಡು (295), ಹೊಳೆನರಸೀಪುರ (290), ಚನ್ನರಾಯಪಟ್ಟಣ (266), ಅರಸೀಕೆರೆ (238), ಬೇಲೂರು (217), ಆಲೂರು (199) ಮತ್ತು ಪಟ್ಟಿಯ ಕೆಳಭಾಗದಲ್ಲಿ ಪ್ರತಿ ಚ.ಕಿ.ಮೀ.ಗೆ 129 ಜನಸಂಖ್ಯೆ ಇರುವ ಸಕಲೇಶಪುರ ತಾಲ್ಲೂಕು ಬರುತ್ತದೆ.  ಜಿಲ್ಲೆಯ ಒಟ್ಟು ಜನಸಾಂದ್ರತೆ ಪ್ರತಿ ಚ.ಕಿ.ಮೀ.ಗೆ 251.

Share this post

Scroll to Top