ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ  ಅಬ್ಬರದ ಶೈಲಿಯ ರಾಜ್ಯಭಾರ : ಸಿ ರುದ್ರಪ್ಪ

C Rudrappa

ಸಿ ರುದ್ರಪ್ಪ, ಹಿರಿಯ ಪತ್ರಕರ್ತರು.

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ  ಕೆಲವು ಘಟನೆಗಳು ಮತ್ತು ಸಂಗತಿಗಳು ನೆನಪಿಗೆ ಬರುತ್ತಿವೆ. ಬಂಗಾರಪ್ಪನವರು ಧೀರೋದಾತ್ತ ನಾಯಕರು. ಅವರದ್ದು ಅಬ್ಬರದ ಶೈಲಿಯ ರಾಜ್ಯಭಾರ. ರಾಜೀವ ಗಾಂಧಿ ನಿಧನದ ನಂತರ ಅವರಿಗೆ ಹಿನ್ನಡೆ ಆರಂಭವಾಯಿತು. PV ನರಸಿಂಹ ರಾವ್ ಪ್ರಧಾನಿಯಾಗುತ್ತಿದ್ದಂತೆ ಭಿನ್ನಮತೀಯರು ಚುರುಕಾದರು. ಅವರ ದೂರುಗಳನ್ನು ದೆಹಲಿ ವರಿಷ್ಠರು ಆಲಿಸ ತೊಡಗಿದರು.ಆದರೆ ಬಂಗಾರಪ್ಪನವರ ಪದಚ್ಯುತಿ ಬಗ್ಗೆ ವರಿಷ್ಠರು ಯಾವುದೇ ಸುಳಿವನ್ನು ನೀಡಲಿಲ್ಲ. ಬಂಗಾರಪ್ಪನವರ ವಿರುದ್ಧ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ ಎನ್ನುವುದನ್ನು ಸ್ವತಃ ಪ್ರಧಾನಿ ನರಸಿಂಹ ರಾವ್ ಅವರೇ ಸ್ಪಷ್ಟವಾಗಿ ನಿರಾಕರಿಸಿದ್ದರು. ಒಮ್ಮೆ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಏರ್ ಪೋರ್ಟಿನಲ್ಲಿ ಪತ್ರಕರ್ತರು ಬಂಗಾರಪ್ಪ ಅವರ ವಿರುದ್ಧ ಭಿನ್ನಮತ ಉಲ್ಬಣಗೊಂಡಿರುವ ಬಗ್ಗೆ ಪ್ರಶ್ನಿಸಿದರು. ಆಗ ನರಸಿಂಹ ರಾವ್ “it is an optical illusion (ಭಿನ್ನಮತ ಇದೆ ಎನ್ನುವುದು ಒಂದು ದೃಷ್ಟಿ ದೋಷ)”ಎಂದು ಬಿಟ್ಟರು. ಇದಾಗಿ ಕೆಲವೇ ತಿಂಗಳಲ್ಲಿ AICC ಪುನಾರಚನೆ ಆಯಿತು. CM ಬಂಗಾರಪ್ಪನವರು ರಾಜ್ಯದಿಂದ ಕಳುಹಿಸಿದ್ದ ಪದಾಧಿಕಾರಿಗಳ ಪಟ್ಟಿಯನ್ನು ನಿರ್ಲಕ್ಷಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ

ಬಂಗಾರಪ್ಪನವರು ಕೋಪದಿಂದ ಕುದಿಯತೊಡಗಿದರು. ತಿರುಪತಿಯಲ್ಲಿ AICC ಮಹಾಧಿವೇಶನ ನಿಗದಿಯಾಯಿತು. ಅಧಿವೇಶನದ ಹಿಂದಿನ ರಾತ್ರಿ ಒಂಬತ್ತು ಗಂಟೆಗೆ UNI ವಾರ್ತಾ ಸಂಸ್ಥೆ “AICC ಅಧಿವೇಶನಕ್ಕೆ ಬಂಗಾರಪ್ಪ ಬಹಿಷ್ಕಾರ”ಎಂಬ ಒಂದು ಲೈನಿನ ಸುದ್ದಿಯನ್ನು ಪ್ರಕಟಿಸಿತು. ನಾವು ನಾಲ್ಕೈದು ವರದಿಗಾರರು CM ನಿವಾಸಕ್ಕೆ ಧಾವಿಸಿದೆವು. ಅವರ ನಿವಾಸಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಹಿಂದೂ ಪತ್ರಿಕೆಯ ಹಿರಿಯ ಪತ್ರಕರ್ತ ಪಿ ರಾಮಯ್ಯನವರ ಪ್ರಯತ್ನದಿಂದಾಗಿ ನಮಗೆ ಅವರ ನಿವಾಸಕ್ಕೆ ಪ್ರವೇಶ ದೊರೆಯಿತು.ಅವರ ನಿವಾಸದ ಆವರಣದ ಹುಲ್ಲು ಹಾಸಿನ ಮೇಲೆ ಬಂಗಾರಪ್ಪನವರು ತಮ್ಮ ಮುದ್ದಿನ ನಾಯಿ ಮರಿಯೊಂದಿಗೆ ಚಿನ್ನಾಟವಾಡುತ್ತಿದ್ದರು. ಭದ್ರತೆಯ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಬಿಟ್ಟರೆ ಬೇರೆ ಯಾರೂ ಇರಲಿಲ್ಲ.ನಮ್ಮ ಜೊತೆಗೆ ಮಾತನಾಡಲು ನಿರಾಕರಿಸಿದರು, ಆದರೆ ರಾಮಯ್ಯನವರು ಮಾತ್ರ ಮುಖ್ಯಮಂತ್ರಿಯವರೊಂದಿಗೆ ಪ್ರತ್ಯೇಕವಾಗಿ ಸ್ವಲ್ಪ ಹೊತ್ತು ಮಾತನಾಡಿಕೊಂಡು ಬಂದರು.ನಾವು ಗೇಟಿನ ಹೊರಗೆ ಬರುತ್ತಿದ್ದಂತೆ ಹಲವು ಪ್ರಮುಖ ನಾಯಕರೂ ಸೇರಿದಂತೆ ಸಾವಿರಾರು ಜನರು ಜಮಾಯಿಸಿದ್ದರು.ಎಲ್ಲರಿಗೂ ಪ್ರವೇಶ ನಿಷೇಧಿಸಲಾಗಿತ್ತು.ರಾಜಕೀಯ ವಾತಾವರಣ ಕಾವೇರತೊಡಗಿತು.ನಾವು ಇಡೀ ರಾತ್ರಿ ಅಲ್ಲೇ ಮೊಕ್ಕಾಂ ಹೂಡಿದೆವು. Cm ನಿವಾಸ ಏಳು ಸುತ್ತಿನ ಕೋಟೆಯಂತಾಗಿತ್ತು, ಮಾರನೆಯ ದಿನ ಬೆಳಗ್ಗೆ “AICC ಅಧಿವೇಶನಕ್ಕೆ ಬಂಗಾರಪ್ಪ ಬಹಿಷ್ಕಾರ”national headline ಆಗಿತ್ತು.ಇಡೀ ಕಾಂಗ್ರೆಸ್ ಪಕ್ಷವನ್ನು ಸುಮಾರು 12 ತಾಸು ತುದಿಗಾಲ ಮೇಲೆ ನಿಲ್ಲಿಸಿದ್ದ ಬಂಗಾರಪ್ಪನವರು ಕೆಲವು ದೆಹಲಿ ನಾಯಕರಿಂದ ಮನವೊಲಿಕೆ ನಂತರ ಬೆಳಗ್ಗೆ 10 ಗಂಟೆ ಸುಮಾರಿಗೆ ತಿರುಪತಿಯತ್ತ ಪ್ರಯಾಣ ಮಾಡಿದರು.ಹೈ ಕಮಾಂಡಿಗೆ ತಮ್ಮ ಬಂಡಾಯದ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದ್ದರು.

◦ ಬಂಗಾರಪ್ಪ ನವರ ಮಾತು ಕೂಡ ಮದ್ದು ಗುಂಡು ಸಿಡಿದಂತೆ.classic ಕಂಪ್ಯೂಟರ್ ಖರೀದಿ,PC ಡೆಂಟಲ್ ಕಾಲೇಜಿಗೆ ಅನುಮತಿ ಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ DLF ಕಂಪನಿಗೆ ಐಷಾರಾಮಿ ವಸತಿ ಸುಮುಚ್ಚಯ ಯೋಜನೆಗೆ ಜಮೀನು ನೀಡಿಕೆ ಪ್ರಸ್ತಾಪದವರೆಗೆ ಹಲವು ಹಗರಣಗಳು ಸದ್ದು ಮಾಡತೊಡಗಿದ್ದವು.ಭಿನ್ನಮತೀಯ ಚಟುವಟಿಕೆ ಜೋರಾಗಿತ್ತು. CM ಖುರ್ಚಿ ಅಲುಗಾಡತೊಡಗಿತ್ತು.ಆಗ the indian express ಪತ್ರಿಕೆ “THE BELEAGUERED CHIEF MINISTER”ಎಂಬ ಸಂಪಾದಕೀಯವನ್ನು ಪ್ರಕಟಿಸಿತ್ತು.ಅಂದು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ DB ಚಂದ್ರೇ ಗೌಡರು ಮುಖ್ಯಮಂತ್ರಿಯವರ ಮೇಲೆ ಮಾತಿನ ದಾಳಿ ನಡೆಸಲು (ರಾಜ್ಯಪಾಲರ ಭಾಷಣ ಅಥವಾ ಬಜೆಟ್ ಮೇಲಿನ ಚರ್ಚೆ ಇರಬಹುದು) ಅದೇ ಸಂಪಾದಕೀಯ ಲೇಖನವನ್ನು ಬಳಸಿಕೊಂಡರು. ಆ ಸಂಪಾದಕೀಯದ ಪ್ರತಿಯೊಂದು ಸಾಲನ್ನೂ ವರ್ಣಿಸುತ್ತಾ ಚಂದ್ರೇಗೌಡರು ಸರ್ಕಾರವನ್ನು ಉಗ್ರವಾಗಿ ಟೀಕಿಸತೊಡಗಿದರು. ಕೆಂಡಾಮಂಡಲರಾದ ಬಂಗಾರಪ್ಪನವರು ದಿಗ್ಗನೆ ಎದ್ದು “ಆ ಸಂಪಾದಕೀಯವೇನು ಬ್ರಹ್ಮ ಲಿಪಿಯೋ?”ಎಂದು ಅಬ್ಬರಿಸುತ್ತಿದ್ದಂತೆ ಸದನದಲ್ಲಿ ಮಾತಿನ ಚಕಮಕಿ,ಕೋಲಾಹಲವೇ ಆಯಿತು.

◦ ಮೂಲ ಪಕ್ಷದಿಂದ ಸಿಡಿದು ಹೊಸ ಪಕ್ಷವನ್ನು ಕಟ್ಟಿ ಹತ್ತು ಪರ್ಸೆಂಟ್ ವೋಟುಗಳನ್ನು ಪಡೆದುಕೊಂಡ ರಾಜ್ಯದ ಮೊದಲ ನಾಯಕರು ಅವರು.ಅವರು ಯಾವದೇ ಜಾತಿ ಮತ್ತು ವರ್ಗಗಳ ಸೋಂಕಿಲ್ಲದೆ ಸಹಜವಾದ organically emerged leader ಆಗಿದ್ದರು. 1994 ರಲ್ಲಿ ಹೊಸ ಪಾರ್ಟಿ ಕಟ್ಟಿ ಹತ್ತು ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದರು.ಆದರೆ ಮೊದಲ ಅಧಿವೇಶನದಲ್ಲಿಯೇ ಮಾಲಿಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಐದು ಶಾಸಕರು ಮುಖ್ಯಮಂತ್ರಿ ದೇವೇಗೌಡರ ಪಾಳೆಯಕ್ಕೆ ಜಿಗಿದುಬಿಟ್ಟರು.ಈ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಬಂಗಾರಪ್ಪನವರು”ನಾನು ಯಾವತ್ತೂ ಎಂಜಿನ್.ನನ್ನ ಹಿಂದೆ ಒಂದು ಬೋಗಿ ಇದೆಯೋ ಅಥವಾ ನೂರು ಬೋಗಿ ಇವೆಯೋ ?ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ”ಎಂದು ಬಿಟ್ಟರು.

◦ ಕೆಲವರು ಇರುತ್ತಾರೆ.ಅವರು ತಮ್ಮನ್ನು ನಂಬಿದವರಿಗೆ ಪ್ರಾಣವನ್ನು ಬೇಕಾದರೂ ಕೊಡುತ್ತಾರೆ.ಆ ಸಾಲಿಗೆ ಸೇರಿದವರು ಬಂಗಾರಪ್ಪನವರು.ತಮಗೆ ನಿಷ್ಠೆಯನ್ನು ತೋರಿಸುವವರ ಪೂರ್ವಾಪರದ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ಕುಣಿಗಲ್ ಐಬಿ ಬಳಿಯ ಫೈರಿಂಗ್ ಪ್ರಕರಣದಲ್ಲಿ ಸಚಿವ “slum “ರಮೇಶ ಅವರನ್ನು ಮತ್ತು ಪತ್ರಕರ್ತ ಕಂಚನಹಳ್ಳಿ ಗಂಗಾಧರ ಮೂರ್ತಿ ಕೊಲೆ ಪ್ರಕರಣದಲ್ಲಿಶಾಸಕ ಎಲ್ ಆರ್ ಶಿವರಾಮೇಗೌಡರನ್ನು ಕೊನೆ ಕ್ಷಣದವರೆಗೂ (ಹೈ ಕೋರ್ಟ್ ನಿರ್ದೇಶನ ಬರುವವರೆಗೂ) ಮುಖ್ಯಮಂತ್ರಿಯವರು ರಕ್ಷಿಸಿದ್ದರು. ಬಂಗಾರಪ್ಪನವರ ಈ ದೊಡ್ಡ ಗುಣವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು.ಆದ್ದರಿಂದ ಬಂಗಾರಪ್ಪನವರ ಸುತ್ತ ಹಲವರು ಅಪಾತ್ರರೇ ಇರುತ್ತಿದ್ದರು.ಇದನ್ನು ನೋಡಿ ಅವರ ನಿಜವಾದ ಅಭಿಮಾನಿಗಳು ಮತ್ತು ಸಂಬಂಧಿಕರು ದೂರ ಸರಿದುಕೊಳ್ಳುತ್ತಿದ್ದರು.

◦ ಗ್ರಾಮೀಣ ಕೃಪಾಂಕ,ರೈತರ ಪಂಪ್ ಸೆಟ್ಟುಗಳಿಗೆ ಉಚಿತ ವಿದ್ಯುತ್,ಆಶ್ರಯ,ಆರಾಧನಾ,ವಿಶ್ವ ಮುಂತಾದ ವಿಶಿಷ್ಠ ಯೋಜನೆಗಳನ್ನು ಜಾರಿಗೆ ತಂದಿದ್ದರು.ಅವರ ಯೋಜನೆಗಳು ಜನಪರ ಕಾಳಜಿ ಮತ್ತು ದೂರ ದೃಷ್ಟಿಯಿಂದ ಕೂಡಿದ್ದವು.ಆದ್ದರಿಂದ ಅವರ ನಂತರ ಬಂದ ಯಾವ ಸರ್ಕಾರಗಳಿಗೂ ಬಂಗಾರಪ್ಪನವರ ಯೋಜನೆಗಳನ್ನು ನಿಲ್ಲಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಾಗಿಲ್ಲ.

◦ ನನಗೆ ತುಂಬಾ ಇಷ್ಟವಾದ ಯೋಜನೆ -“ಆರಾಧನಾ”.ಸಾಮಾನ್ಯವಾಗಿ ರಾಮ,ಕೃಷ್ಣ,ಶಿವ,ಆಂಜನೇಯ,ಮಂಜುನಾಥ,ಪಾರ್ವತಿ,ಲಕ್ಷ್ಮಿ,ಚಾಮುಂಡಿ ಮುಂತಾದ ಸರ್ಕಾರೀ ಕೃಪಾ ಪೋಷಿತ ಐಷಾರಾಮಿ ದೇವರುಗಳಿಗೆ ಗರ್ಭಗುಡಿ, ಗೋಪುರ ಮತ್ತು ವಿಜೃಂಭಣೆಯ ರಥೋತ್ಸವ ಮತ್ತು ಬೃಹತ್ ದೇವಸ್ಥಾನಗಳಿರುತ್ತವೆ. ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತದೆ.ಪ್ರತಿ ದಿನವೂ ವಿಶೇಷ ಅಲಂಕಾರ,ಮಂಗಳಾರತಿ,ಹಣ್ಣು ಹಂಪಲು ಮತ್ತು ವಿಶೇಷ ಖಾದ್ಯಗಳ ನೈವೇದ್ಯ -ಹೀಗೆ ಸುಖದ ಸುಪ್ಪತ್ತಿಗೆಯಲ್ಲಿ ಈ ದೇವರುಗಳು ತೇಲಾಡುತ್ತವೆ.ಆದರೆ ಭೂತಪ್ಪ,ಚೌಡಮ್ಮ,ಕಾಳವ್ವ,ದುರುಗಮ್ಮ ,ಮಾರಮ್ಮ ಮುಂತಾದ ದೇವರುಗಳ ಪರಿಸ್ಥಿತಿ ತುಂಬಾ ಶೋಚನೀಯ. ಕಾಡುಮೇಡುಗಳಲ್ಲಿರುವ ಈ ದೇವರುಗಳ ಮೈಮೇಲೆ ಭಕ್ತಾದಿಗಳು ಅಪರೂಪಕ್ಕೊಮ್ಮೆ ನಾಲ್ಕೈದು ಕೊಡ ನೀರು ಚೆಲ್ಲಿ ಮೈತುಂಬಾ ಅರಿಶಿಣ ಕುಂಕುಮ ಬಳಿದು ಸಿಂಗರಿಸಿ ಕುರಿ-ಕೋಳಿ ಸಮರ್ಪಿಸಿದಾಗ ಮಾತ್ರ ಸ್ವಲ್ಪ ಸಂಭ್ರಮ. ಇನ್ನುಳಿದಂತೆ ಈ ದೈವಗಳು ದಟ್ಟ ಅಡವಿಯಲ್ಲಿ ಅಥವಾ ಬಟಾ ಬಯಲಿನಲ್ಲಿ ಮಳೆ ಗಾಳಿಗೆ,ಬಿಸಿಲಿಗೆ ಮೈ ಒಡ್ಡಿಕೊಂಡು ಅನಾಥವಾಗಿ ನಿಂತಿರಬೇಕು. ಇಂತಹ ನಿರ್ಗತಿಕ,ಅಲೆಮಾರಿ ಮತ್ತು ಕ್ಷುದ್ರ ದೈವಗಳ ನೆರವಿಗೆ ಧಾವಿಸಿದವರು ಬಂಗಾರಪ್ಪನವರು.ಈ ದೇವರುಗಳು ಇರುವ ಜಾಗಕ್ಕೆ ಉತ್ತಮವಾದ ರಸ್ತೆ ,ಈ ದೈವಗಳ ತಲೆಯ ಮೇಲೊಂದು ಸೂರು (ಒಂದು ಚಿಕ್ಕ RCC ಕಟ್ಟಡ ಅಥವಾ ಹೆಂಚಿನ ಮನೆ ) ಭಕ್ತರಿಗೆ ನೀರು ಮತ್ತಿತರ ಸೌಲಭ್ಯವನ್ನು ಆರಾಧನಾ ಯೋಜನೆ ಮೂಲಕ ಕಲ್ಪಿಸಿದರು. ಈ ಮೂಲಕ ಈ ದೇವರುಗಳೂ ಕೂಡ ಘನತೆ, ಗೌರವ ಮತ್ತು ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದರು.

◦ ಒಂದೇ ದಿನ ಸುಮಾರು 17 ತಮಿಳರನ್ನು ಆಹುತಿ ತೆಗೆದುಕೊಂಡ ಕಾವೇರಿ ಬಂದ್ ಗೆ ಬಂಗಾರಪ್ಪ ಸರ್ಕಾರ ಪರೋಕ್ಷವಾಗಿ ಸಂಪೂರ್ಣ ಬೆಂಬಲ ನೀಡಿತ್ತು. ಈ ಮೂಲಕ ಬಂಗಾರಪ್ಪನವರು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.  ತಾವು ಜೀವಮಾನವಿಡೀ ಗಳಿಸಿದ್ದ ಭಾರಿ ಜನಶಕ್ತಿಯನ್ನು ಬಿಜೆಪಿ ಗೆ ಧಾರೆ ಎರೆದು ಬಿಟ್ಟರು.

◦ ಬಹುತೇಕ ಮಾಸ್ ಲೀಡರ್ ಗಳಿಗೆ ಒಂದು ದೌರ್ಬಲ್ಯ ಇರುತ್ತದೆ.ಅದು ಭ್ರಷ್ಟಾಚಾರ.ಅಂತಹ ದೌರ್ಬಲ್ಯ ಬಂಗಾರಪ್ಪನವರಿಗೂ ಸ್ವಲ್ಪ ಮಟ್ಟಿಗೆ ಇತ್ತು. ಈ ಮೂಲಕ ಬಂಗಾರಪ್ಪ ನವರು ತಮ್ಮ ಕಾರ್ಯವೈಖರಿ ಯಾವ ರೀತಿ ಇರಬಹುದು ಎಂಬ ಸುಳಿವನ್ನು ಅರಂಭದಲ್ಲಿಯೇ ನೀಡಿದ್ದರು

Share this post

Scroll to Top